ರಸ್ತೆಗಳು ಜಲಾವೃತ-ಪ್ರಯಾಣಿಕರ ಪರದಾಟ

Update: 2016-08-31 17:31 GMT

ಹೊಸದಿಲ್ಲಿ, ಆ.31: ಬುಧವಾರ ಮುಂಜಾನೆ ಸುರಿದ ಮುಸಲ ಧಾರೆಯು ರಾಷ್ಟ್ರ ರಾಜಧಾನಿ ವಲಯದ ವಿಶಾಲ ಭಾಗವನ್ನು ಮುಳುಗಿಸಿದೆ.

ಸಿಡಿಲು-ಗಾಳಿಯೊಂದಿಗೆ 4 ತಾಸುಗಳ ಕಾಲ ಸುರಿದ ಭಾರೀ ಮಳೆಯು ದಕ್ಷಿಣ ಹಾಗೂ ಮಧ್ಯ ದಿಲ್ಲಿಯ ರಸ್ತೆಗಳನ್ನೆಲ್ಲ ಜಲಾವೃತಗೊಳಿಸಿದ್ದು, ನೂರಾರು ಪ್ರಯಾಣಿಕರು ಬಸ್ ಹಾಗೂ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಪರಿತಪಿಸುವಂತೆ ಮಾಡಿದೆ.
ಆಟೊಗಳು ರಸ್ತೆಗಿಳಿಯದೆ ಕ್ಯಾಬ್‌ಗಳು ದರವೇರಿಸಿದುದರಿಂದಾಗಿ ಕಚೇರಿಗೆ ಹೋಗುವವರು ತುಂಬಿ ತುಳುಕುತ್ತಿದ್ದ ಬಸ್‌ಗಳಲ್ಲಿ ಬವಣೆಪಡುವಂತಾಯಿತು. ಉಬರ್‌ನಂತಹ ಕ್ಯಾಬ್‌ಗಳು ಮಾಮೂಲಿಗಿಂತ 10 ಪಟ್ಟು ದರ ವಸೂಲಿ ಮಾಡುತ್ತಿವೆಯೆಂದು ಹಲವರು ದೂರಿದ್ದಾರೆ.
ದಿಲ್ಲಿ ರಾಜಧಾನಿ ವಲಯದಲ್ಲಿ ಕೇವಲ 2 ತಾಸುಗಳಲ್ಲಿ 53 ಮಿ.ಮೀ. ಮಳೆ ದಾಖಲಾಗಿದೆ. ಇದು 2 ತಾಸುಗಳಲ್ಲಿ ಅಸಾಧಾರಣ ದೊಡ್ಡ ಸಂಖ್ಯೆಯಾಗಿದೆಯೆಂದು ಐಜಿಐ ವಿಮಾನ ನಿಲ್ದಾಣದ ಹವಾಮಾನ ಇಲಾಖೆಯ ಪ್ರಭಾರ ನಿರ್ದೇಶಕ ಆರ್.ಕೆ. ಜೆನಮಣಿ ತಿಳಿಸಿದ್ದಾರೆ.
ಸಫ್ದರ್‌ಜಂಗ್ ಕೇಂದ್ರದಲ್ಲಿ, ದಿಲ್ಲಿಯ ಈ ಋತುವಿನ ಅತಿ ಹೆಚ್ಚು ಮಳೆ ದಾಖಲಾಗಿದೆ. ನಗರದಲ್ಲಿ ಮುಂಜಾನೆಯಿಂದ 65.7 ಮಿ.ಮೀ. ಮಳೆ ಸುರಿದಿದೆ. ಅದರಲ್ಲಿ 62.7 ಮಿ.ಮೀ. ಮುಂಜಾನೆ 8:30ರಿಂದ 11:30ರ ವರೆಗಿನ 3 ತಾಸುಗಳ ಅವಧಿಯಲ್ಲಿ ಸುರಿದಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.
 ದಿಲ್ಲಿಯಲ್ಲಿ ಮಾತ್ರವಲ್ಲದೆ, ಹೈದರಾಬಾದ್‌ನಲ್ಲೂ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾದ ಬಗ್ಗೆ ವರದಿಯಾಗಿದೆ. ನಗರದ ಕೇಂದ್ರ ಹಾಗೂ ದಕ್ಷಿಣ ಭಾಗದಲ್ಲಿ ಭಾರೀ ಸಂಚಾರ ಅಡಚಣೆ ಉಂಟಾಗಿದೆ.
ಮಳೆಯು ತಗ್ಗುವ ಲಕ್ಷಣ ಕಾಣಿಸದೆ, ಗುರುಗ್ರಾಮ, ನೋಯ್ಡಾ ಹಾಗೂ ಘಾಝಿಯಾಬಾದ್‌ಗಳ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ 8 ಹಾಗೂ 12ರಲ್ಲಿ ತಾಸುಗಳ ಕಾಲ ಸಿಲುಕಿ ಪರದಾಡುವಂತಾಯಿತು. 8 ಸಿಟಿ ಬಸ್‌ಗಳು ರಸ್ತೆಯಲ್ಲೇ ಕೆಟ್ಟು ನಿಂತವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News