ನಾಳೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಯಶಸ್ಸಿಗೆ ಕಾರ್ಮಿಕ ಸಂಘಟನೆಗಳ ಕರೆ

Update: 2016-08-31 18:47 GMT

ಮಂಗಳೂರು, ಆ.31: ವಿವಿಧ ಪ್ರಮುಖ 17 ಬೇಡಿಕೆಗಳನ್ನು ಮುಂದಿಟ್ಟು ದೇಶಾದ್ಯಂತ ಸೆ.2ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಮಂಗಳೂರಿನ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ ವ್ಯಕ್ತಪಡಿಸಿದ್ದು ಸಾರ್ವಜನಿಕರು ಸಹಕರಿಸುವಂತೆ ಕರೆ ನೀಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಮುಖಂಡ ವಸಂತ ಆಚಾರಿ, ಸೆ.2ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮುಷ್ಕರ ನಡೆಯಲಿದ್ದು, ಆಸ್ಪತ್ರೆ, ಆ್ಯಂಬುಲೆನ್ಸ್, ಮೆಡಿಕಲ್ ಶಾಪ್, ಹಾಲಿನ ವಾಹನ ಹಾಗೂ ಮದುವೆ ವಾಹನಗಳಿಗೆ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ ಎಂದರು. ವಿಪರೀತ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಕಾರ್ಮಿಕ ಕಾನೂನುಗಳನ್ನು ಮಾಲಕರ ಪರ ತಿದ್ದುಪಡಿ ಮಾಡುವುದು, ಸಾರಿಗೆ ರಂಗದ ನೌಕರರಿಗೆ ಮಾರಕವಾಗುವ ರಸ್ತೆ ಸುರಕ್ಷತಾ ಮಸೂದೆಯನ್ನು ಜಾರಿಗೊಳಿಸುತ್ತಿರುವ ಸರಕಾರದ ನೀತಿಯನ್ನು ವಿರೋಧಿಸಿ ಈ ಮುಷ್ಕರ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಎಲ್ಲ ಕೈಗಾರಿಕಾ ಘಟಕಗಳು, ಅಂಗಡಿ ಮುಂಗಟ್ಟುಗಳಲ್ಲಿ ದುಡಿಯುವ ಕಾರ್ಮಿಕರು, ಬೀಡಿ, ಕಟ್ಟಡ, ಕ್ಯಾಶ್ಯೂ, ಹಮಾಲಿ, ಬೀದಿಬದಿ ವ್ಯಾಪಾರಿಗಳು, ಬಸ್ ನೌಕರರು ಸೇರಿದಂತೆ ಎಲ್ಲ ಕಾರ್ಮಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಎಚ್.ವಿ.ರಾವ್, ವೈ.ಸೀತಾರಾಮ ಬೇರಿಂಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News