ಗಣೇಶೋತ್ಸವಕ್ಕೆ ಸ್ಥಳ ಬಾಡಿಗೆ ವಿವಾದ: ಮಾತಿನ ಚಕಮಕಿ

Update: 2016-08-31 18:57 GMT

ಪುತ್ತೂರು, ಆ.31: ಇಲ್ಲಿನ ಕಿಲ್ಲೆ ಮೈದಾನದಲ್ಲಿ 59 ವರ್ಷಗಳಿಂದ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸ್ಥಳ ಬಾಡಿಗೆ ವಿಧಿಸುವ ಮೂಲಕ ನಗರಸಭೆಯು ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ವಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿದ ಘಟನೆ ಬುಧವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಈ ಸಂದರ್ಭ ಆಡಳಿತ ಮತ್ತು ವಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದು ಸಭೆ ಕೆಲಕಾಲ ಗೊಂದಲದ ಗೂಡಾಯಿತು. ಜಯಂತಿ ಬಲ್ನಾಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ಸದಸ್ಯ ರಾಜೇಶ್ ಬನ್ನೂರು, ಸಂತ ಫಿಲೊಮಿನಾ ಕಾಲೇಜ್‌ನ ಮಹಾದ್ವಾರದ ಎರಡೂ ಬದಿಗಳಲ್ಲಿ ಹೂದೋಟವನ್ನು ನಿರ್ಮಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೂದೋಟ ನಿರ್ಮಿಸಲು ಅವಕಾಶ ನೀಡುವುದೆಂದು ತಿರುಚಿ ನಿರ್ಣಯ ಬರೆಯಲಾಗಿದೆ. ನಿಮಗೆ ಬೇಕಾದಂತೆ ನಿರ್ಣಯ ಬರೆಯುವುದಾದರೆ ಸಭೆ ನಡೆಸುವುದು ಏಕೆ ಎಂದು ಪ್ರಶ್ನಿಸಿದರು.


59 ವರ್ಷಗಳಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಈವರೆಗೆ ಸ್ಥಳ ಬಾಡಿಗೆ ವಸೂಲು ಮಾಡುತ್ತಿರಲಿಲ್ಲ. ಈ ಬಾರಿ ಬಾಡಿಗೆ ವಿಧಿಸುವ ಮೂಲಕ ನಗರಸಭೆಯು ಹಿಂದೂ ವಿರೋಧಿ ನಿಲುವು ತಾಳುತ್ತಿದೆ ಎಂದು ಆರೋಪಿಸಿದರು. ಉಪಾಧ್ಯಕ್ಷ ವಿಶ್ವನಾಥ ಗೌಡ, ರಾಮಣ್ಣ ಗೌಡ ಅಲಂಗ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ಸದಸ್ಯ ಮುಹಮ್ಮದ್ ಅಲಿ, ಬಾಡಿಗೆ ನೀಡುವಂತೆ ನಾವು ಯಾವುದೇ ನೋಟಿಸ್ ನೀಡಿಲ್ಲ. ಈ ಹಿಂದೆ ಬಾಡಿಗೆ ಪಡೆದ ಬಗ್ಗೆ ಸಾರ್ವಜನಿಕರೊಬ್ಬರು ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೋರಿದ್ದರು. ಈ ಬಗ್ಗೆ ಅಧಿಕಾರಿಗಳು ತಿಳಿಸಿದಾಗ ಅವರಾಗಿಯೇ ಬಾಡಿಗೆ ಪಾವತಿಸಿದ್ದಾರೆ. ಹಣ ಪಾವತಿಸಿ ಎಂದು ನಾವು ಹೇಳಿಲ್ಲ. ಹಣ ಪಡೆದುಕೊಂಡ ಹಿಂದಿನ ಪೌರಾಯುಕ್ತರಲ್ಲಿ ಈ ಬಗ್ಗೆ ಕೇಳಿ ಎಂದು ಹೇಳಿದರು.


ಆಡಳಿತ ಪಕ್ಷದ ಶಕ್ತಿ ಸಿನ್ಹಾ ಮಾತನಾಡಿ, ನಾವೂ ಹಿಂದುಗಳೇ, ನಮಗೂ ಭಕ್ತಿಯಿದೆ. ಕೇವಲ ಬಿಜೆಪಿ ಯವರಿಗೆ ಮಾತ್ರ ಗಣಪತಿ ದೇವರಲ್ಲ. ನೀವು ದೇವರ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಈ ನಡುವೆ ನಾಮನಿರ್ದೇಶಿತ ಸದಸ್ಯರು ಮಾತನಾಡಿದಾಗ ಉಪಾಧ್ಯಕ್ಷರು ನಾಮ ನಿರ್ದೇಶಿತ ಸದಸ್ಯರಿಗೆ ಮಾತನಾಡುವ ಅವಕಾಶವಿಲ್ಲ ಎಂದರು. ಬಳಿಕ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ತನಗೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ನಾನೆಲ್ಲೂ ಅವರಿಗೆ ಹಣ ಪಾವತಿಸಿ ಎಂದು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು. ನಗರಸಭೆ ‘ನರಕಸಭೆ’ಯಾಗಿದೆ: ಸೋಮಪ್ಪಸಪಲ್ಯ
ಹಣ ನೀಡದಿದ್ದಲ್ಲಿ ನಗರಸಭೆಯಲ್ಲಿ ಯಾವುದೇ ಕೆಲಸಗಳು ನಡೆಯತ್ತಿಲ್ಲ. ಇಲ್ಲಿನ ಅಧಿಕಾರಿಗಳಿಂದ ನಗರಸಭೆಯು ‘ನರಕ ಸಭೆ’ಯಾಗಿದೆ. ಇಲ್ಲಿನ ಯಾವ ಅಧಿಕಾರಿಗಳಿಗೆ, ಯಾವ ಟೇಬಲ್‌ಗೆ ಎಷ್ಟು ಹಣ ನೀಡಬೇಕು ಎಂಬ ಪಟ್ಟಿ ನೀಡಿ. ಇಲ್ಲದಿದ್ದಲ್ಲಿ ಜನರಿಗೆ ಉತ್ತರಿಸಲು ನಮಗೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಸೋಮಪ್ಪ 
ಸಪಲ್ಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಸದಸ್ಯ ಸುಜೀಂದ್ರ ಪ್ರಭು, ಸದಸ್ಯ ಬಾಲಚಂದ್ರ ಮಾತನಾಡಿದರು. ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿ ಕಲಾಪ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News