ದಪ್ಪಗಿದ್ದಾಳೆ ಎಂದು ಪತ್ನಿಗೆ ಇರಿದ ದುಷ್ಟನನ್ನು ಈ ನ್ಯಾಯಾಲಯ ಜೈಲಿಗೆ ಕಳಿಸಲಿಲ್ಲ, ಏಕೆಂದರೆ ....
ಕಾನ್ಸಾಸ್, ಸೆ.1: ತನ್ನ ಪತ್ನಿ ದಪ್ಪಗಿದ್ದಾಳೆಂಬ ಕಾರಣ ನೀಡಿ ಆಕೆಯನ್ನು ಚೂರಿಯಿಂದ ಇರಿದು ಕೊಲೆಗೈಯ್ಯಲೆತ್ನಿಸಿದ 46 ವರ್ಷದ ಅನಿವಾಸಿ ಭಾರತೀಯ ಕಾನ್ಸಾಸ್ ನಿವಾಸಿ ನವೀನ್ ಕುಮಾರ್ ಪಟೇಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರೂ ಇಲ್ಲಿನ ನ್ಯಾಯಾಲಯವೊಂದು ಆತನನ್ನು ಜೈಲಿಗೆ ಕಳುಹಿಸಲಿಲ್ಲ.
ಆತ ಜೈಲಿಗೆ ಹೋದರೆ ಆತನ ಪತ್ನಿ ಮಕ್ಕಳು ಸೇರಿದಂತೆ ಆತನ ಹಿಂದೂ ಧರ್ಮದ ಕುಟುಂಬ ಹಿಂದೂ ಸಂಪ್ರದಾಯದಂತೆ ಬಹಿಷ್ಕೃತಗೊಳ್ಳಬಹುದು ಎಂದು ಈ ಪ್ರಕರಣದ ವಿಚಾರಣೆ ವೇಳೆ ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಧೀಶರು ಈ ಹಿಂದೆ ಆತನಿಗೆ ಜೈಲು ಶಿಕ್ಷೆ ಘೋಷಿಸಿದ್ದರೂ ಆತನಿಗೆ ಯಾವುದೇ ಶಿಕ್ಷೆ ನೀಡದೆ ಬಿಟ್ಟು ಬಿಟ್ಟಿದ್ದಾರೆ.
ಪಟೇಲ್ ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದಲೂ ಬಳಲುತ್ತಿದ್ದು ಆತನ ಮದ್ಯ ವ್ಯಸನದಿಂದ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆಯೆಂದೂ ವಕೀಲರು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದರು.
ಇನ್ನಷ್ಟು ಕುತೂಹಲಕಾರಿ ವಿಚಾರವೆಂದರೆ ಆತನಿಂದ ಇರಿಯಲ್ಪಟ್ಟ ಆತನ ಪತ್ನಿ ಸಹಿತ ಆತನ ಕುಟುಂಬದ ಒಂದು ಡಜನ್ ಗೂ ಮಿಕ್ಕಿ ಸದಸ್ಯರು ಕೋರ್ಟಿಗೆ ಹಾಜರಾಗಿ ಆತನಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಫೇರ್ ಚೈಲ್ಡ್ "ಈ ಪ್ರಕರಣದಲ್ಲಿ ಸಂಸ್ಕೃತಿಯ ವಿಚಾರ ಬಹುಮುಖ್ಯವಾಗಿದೆ’’ಎಂದರು.