ದಲಿತನೆಂಬ ಕಾರಣಕ್ಕೆ ನನ್ನ ಪದಚ್ಯುತಿಗೆ ಸಂಚು: ಸಂದೀಪ್
ಹೊಸದಿಲ್ಲಿ, ಸೆ.1: ತಾನು ದಲಿತನೆಂಬ ಕಾರಣಕ್ಕಾಗಿ ತನ್ನ ಪದಚ್ಯುತಿಗೆ ಸಂಚು ನಡೆಸಲಾಗಿತ್ತೆಂದು ಆಕ್ಷೇಪಾರ್ಹ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ಉಚ್ಚಾಟಿತ ಸಚಿವ ಸಂದೀಪ್ ಕುಮಾರ್ ಗುರುವಾರ ಆಪಾದಿಸಿ ದ್ದಾರೆ. ಈ ಹಗರಣದ ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
‘‘ನಾನು ವಾಲ್ಮೀಕಿ ಸಮಾಜಕ್ಕೆ ಸೇರಿದವನಾಗಿದ್ದು, ಸಿಡಿ ಹಗರಣವು ನನ್ನ ವಿರುದ್ಧ ನಡೆದ ಸಂಚಾಗಿದೆ. ಈ ಬಗ್ಗೆ ತನಿಖೆಯಾಗಬೇಕಿದೆ. ಈ ವೀಡಿಯೊವನ್ನು ಟೆಲಿವಿಶನ್‌ನಲ್ಲಿ ನೋಡಿ ನನಗೆ ನೋವಾಗಿದೆ. ಈ ಸಿಡಿಯ ಸಾಚಾತನದ ಬಗ್ಗೆ ತನಿಖೆಯಾಗಬೇಕಿದೆ’’ ಎಂದು ಅವರು ಗುರುವಾರ ತನ್ನ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.
‘‘ನಾನು ಎಎಪಿಯ ಏಕೈಕ ದಲಿತ ಮುಖವಾಗಿದ್ದೇನೆ. ದಲಿತ ಸಮುದಾಯದಲ್ಲೂ ನಾನು ಅತ್ಯಂತ ಜನಪ್ರಿಯನಾಗಿದ್ದೇನೆ. ಈ ಕಾರಣಕ್ಕಾಗಿ ನನ್ನ ವಿರುದ್ಧ ಸಂಚು ನಡೆಸಲಾಗಿದೆೆ. ನಮಗೆ ರಾಜಕೀಯ ಹಿನ್ನೆಲೆಯಿರದ ಕಾರಣ ಇತರ ಪಕ್ಷಗಳು ನಮ್ಮನ್ನು ಬೆನ್ನುಹತ್ತಿವೆ’’ ಎಂದವರು ಹೇಳಿದು.
ದಲಿತರು ಎದ್ದುನಿಲ್ಲಲು ಪ್ರಯತ್ನಿಸಿದಾಗಲೆಲ್ಲಾ ಅವರನ್ನು ಹತ್ತಿಕ್ಕುವುದು ಈ ದೇಶದ ಇತಿಹಾಸವೇ ಆಗಿದೆ. ಸಿಡಿಹಗರಣವು ಸಂಪೂರ್ಣವಾಗಿ ತನ್ನ ವಿರುದ್ಧ ನಡೆದ ಸಂಚಾಗಿದ್ದು, ಆ ಬಗ್ಗೆ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದರು.