ಭಾರತ್ ಬಂದ್ ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

Update: 2016-09-02 06:09 GMT

ಮಂಗಳೂರು, ಸೆ.2: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಮತ್ತು ಸಾರಿಗೆ ಸಂಸ್ಥೆ ಬಸ್ಗಳು ಸಂಚಾರ ಸ್ಥಗಿತಗೊಳಿಸಿದ್ದು, ಆಟೋ ರಿಕ್ಷಾಗಳು ಬೆರಳೆಣಿಕೆಯ ಪ್ರಮಾಣದಲ್ಲಿ ಕಂಡು
ಬರುತ್ತಿವೆ. 

ನಗರದ ಪಡೀಲ್, ಸುರತ್ಕಲ್ ಮತ್ತು ಕುತ್ತಾರಿನಲ್ಲಿ ಬಂದ್ ಬೆಂಬಲಿಸಿ ರಸ್ತೆಗಳಲ್ಲಿ ಟೈರ್ ಗಳನ್ನು ಸುಡಲಾಗಿದೆ.. ನಗರವ ವಿವಿಧೆಡೆ 6ಕ್ಕೂ ಹೆಚ್ಚು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬೆಂಗಳೂರಿಗೆ ತೆರಳಿದ್ದ ಐರಾವತ ಬಸ್, ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದ ರಾಜ ಹಂಸ, ದುರ್ಗಾಂಬ ಸೇರಿದಂತೆ ಎರಡು ಖಾಸಗಿ ಬಸ್, ಎರಡು ಖಾಸಗಿ ಶಾಲೆಗಳ ತಲಾ ಒಂದು ಬಸ್ ಗೆ  ಕಲ್ಲು ತೂರಾಟದಿಂದ ಹಾನಿಯಾಗಿದೆ. 

ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಸಾರ್ವಜನಿಕ ವಾಹನಗಳಿಗಾಗಿ ಪರದಾಡುತ್ತಿದ್ದಾರೆ.

ಸುರತ್ಕಲ್ ನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೆಚ್ಚಿನ ಅಂಗಡಿ, ಹೋಟೆಲ್ ಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತಿವೆ. ಖಾಸಗಿ ವಾಹನಗಳು ಕ್ಯಾಬ್ ಗಳು ಎಂದಿನಂತೆ ಸಂಚರಿಸುತ್ತಿವೆ. ಆದರೆ, ಬಸ್ ನಿಲ್ದಾಣ ಮಾತ್ರ ಬಸ್ ಗಳು, ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. 

ಇದೇ ಸಂದರ್ಭ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಡಿವೈಎಫ್ ಐ ಕಾರ್ಯಕರ್ತರು ಸುರತ್ಕಲ್ ನಲ್ಲಿ ರಸ್ತೆತಡೆ ನಡೆಸಿ ಧರಣಿ ನಡೆಸಿದರು. ಸುರತ್ಕಲ್ ಠಾಣಾ ಪೊಲೀಸರು ಭದ್ರತೆ ಒದಗಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News