×
Ad

ಹುತಾತ್ಮ ಯೋಧನ ಪತ್ನಿಗೆ 45 ವರ್ಷಗಳ ಬಳಿಕ ಸರಕಾರ ಭೂಮಿ ನೀಡಿದ್ದು ಎಲ್ಲಿ ಗೊತ್ತೇ ?

Update: 2016-09-02 11:17 IST

ಚಂಡೀಗಢ, ಸೆ.2: ಭಾರತ ಮತ್ತು ಪಾಕಿಸ್ತಾನಗಳ ನಡುವೆ 1971 ರ ಯುದ್ಧದ ಸಂದರ್ಭ ನಾಪತ್ತೆಯಾಗಿ ನಂತರ ಕೇಂದ್ರದಿಂದ ಹುತಾತ್ಮನೆಂದು ಘೋಷಿಸಲ್ಪಟ್ಟಿದ್ದ ಮೇಜರ್ ಕನ್ವಲ್ ಜೀತ್ ಸಿಂಗ್ ಅವರ ಪತ್ನಿ ಜಸ್ಬೀರ್ ಕೌರ್ ಅವರ ಸಮಸ್ಯೆಗಳಿಗೆ ಅಂತ್ಯವೇ ಇಲ್ಲವೇನೋ. ವಿಶೇಷ ನಿಯಮಗಳ ಪ್ರಕಾರ ಅವರಿಗೆ 10 ಎಕರೆ ಕೃಷಿಯೋಗ್ಯ ಭೂಮಿ ನೀಡುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪಂಜಾಬ್ ಸರಕಾರಕ್ಕೆ ಆದೇಶ ನೀಡಿದ 15 ತಿಂಗಳುಗಳ ತರುವಾಯ ಪಂಜಾಬ್ ಸರಕಾರ ಆಕೆಗೆ 10 ಭೂಮಿ ಮಂಜೂರುಗೊಳಿಸಿದೆ.

ಇದೀಗ ಆಕೆಯ ಪತಿ ನಾಪತ್ತೆಯಾಗಿ 45 ವರ್ಷಗಳ ನಂತರ 10 ಎಕರೆ ಭೂಮಿ ಮಂಜೂರುಗೊಳಿಸಿದೆಯಾದರೂ ಇದು ‘ನಿರುಪಯೋಗಿ’ ಭೂಮಿಯಾಗಿದೆ. ಅಲ್ಲದೆ, ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯ ಪಕ್ಕದಲ್ಲಿದೆ. ಈ ಭೂಮಿಗೆ ನೀರಾವರಿ ಸೌಲಭ್ಯವಿಲ್ಲ ಹಾಗೂ ಇಲ್ಲಿ ಟ್ಯೂಬ್ ವೆಲ್ ಅಳವಡಿಸಲೂ ಅನುಮತಿಯಿಲ್ಲವಾಗಿದೆ. ಬಿಎಸ್‌ಎಫ್ ಚೆಕ್ ಪೋಸ್ಟ್ ಗಿಂತಲೂ ಬಹಳಷ್ಟು ಮುಂದೆ ಝೀರೋ ಪಾಯಿಂಟ್ ನಲ್ಲಿ ಈ ಭೂಮಿ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿದೆ ಹಾಗೂ ಇಲ್ಲಿ ತಾತ್ಕಾಲಿಕ ಗುಡಿಸಲು ಕೂಡ ಕಟ್ಟಲು ಅನುಮತಿಯಿಲ್ಲ.

ಇದರಿಂದ ತೀವ್ರ ನಿರಾಸೆಗೊಂಡಿರುವ ಕೌರ್ ಗುರುವಾರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕದ ತಟ್ಟಿದ್ದು ರಾಜ್ಯ ಸರಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.

ಅವರಿಗೆ ಭೂಮಿ ನೀಡುವಂತೆ ಈ ಹಿಂದಿನ ಹೈಕೋರ್ಟ್ ಆದೇಶ ಕೂಡ ಕೌರ್ ಅವರು ನ್ಯಾಯಾಲಯಕ್ಕೆ ಅನುಮತಿ ಸಲ್ಲಿಸಿದ ನಂತರವೇ ನೀಡಲಾಗಿತ್ತು.

ಈ ವರ್ಷದ ಮೇ 26 ರಂದು ಕೌರ್ ಅವರು ಕಂದಾಯ ಕಾರ್ಯದರ್ಶಿ ಕರಣ್ ಬೀರ್ ಸಿಂಗ್ ಅವರಿಗೆ ನೋಟಿಸ್ ಒಂದನ್ನು ಜಾರಿ ಮಾಡಿ ತನಗೆ ಪರ್ಯಾಯ ಭೂಮಿ ಇಲ್ಲವೇ 10 ಎಕರೆ ಕೃಷಿಯೋಗ್ಯ ಭೂಮಿಯ ಮೌಲ್ಯ ನೀಡಬೇಕೆಂದು ಕೇಳಿದ್ದರೂ ಅವರು ಪ್ರತಿಕ್ರಿಯಿಸಿರಲಿಲ್ಲ.

ಮೇಜರ್ ಕನ್ವಲ್ ಜೀತ್ ಸಿಂಗ್ ಅವರನ್ನು ಭಾರತ-ಪಾಕ್ ಯುದ್ಧ ಸಂದರ್ಭ 1971ರ ಡಿಸೆಂಬರ್ 3 ರಂದು ಹುಸೈನ್ ವಾಲಾ ಸೆಕ್ಟರಿನಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತೆಂದು ತಿಳಿಯಲಾಗಿದೆ. ಅವರು ದೇಶದ ಮೂರನೆ ಅತ್ಯುನ್ನತ ಪ್ರಶಸ್ತಿ ಶೌರ್ಯ ಚಕ್ರ ಕೂಡ ಪಡೆದವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News