ಈ ಮುದ್ದು ಮುಖದ ಬಾಲಕ ಜಗತ್ತಿನ ಪ್ರತಿಷ್ಠಿತ ವಿವಿಯ ಪದವಿ ವಿದ್ಯಾರ್ಥಿ !

Update: 2016-09-02 08:21 GMT

ನ್ಯೂಯಾರ್ಕ್, ಸೆ.2: 12 ವರ್ಷದ ಅಸಾಧಾರಣ ಬುದ್ಧಿಮತ್ತೆಯ ಬಾಲಕ ಜೆರೆಮಿ ಶುಲೆರ್ ಅಮೆರಿಕದ ಪ್ರತಿಷ್ಠಿತ ಕಾರ್ನ್ ವೆಲ್ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪ್ರವೇಶ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಇಷ್ಟು ಸಣ್ಣ ಪ್ರಾಯದಲ್ಲಿ ವಿಶ್ವವಿದ್ಯಾನಿಲಯವೊಂದಕ್ಕೆ ಪ್ರವೇಶ ಪಡೆದ ಪ್ರಥಮ ಬಾಲಕನೆಂಬ ಹೆಗ್ಗಳಿಕೆಗೂ ಆತ ಪಾತ್ರನಾಗಿದ್ದಾನೆ.

ಬಾಲಕ ಜೆರೆಮಿಯ ತಂದೆ ಅಮೆರಿಕನ್ ಆಗಿದ್ದರೆ ತಾಯಿ ಕೊರಿಯಾ ಸಂಜಾತೆ. ಇಬ್ಬರೂ ಬಾಹ್ಯಾಕಾಶ ಇಂಜಿನಿಯರುಗಳಾಗಿದ್ದರೂ ಆತನ ತಾಯಿ ಅಸಾಧಾರಣ ಬುದ್ಧಿಮತ್ತೆಯ ಮಗನಿಗೆ ಮನೆಯಲ್ಲಿಯೇ ಶಿಕ್ಷಣ ನೀಡಲು ನಿರ್ಧರಿಸಿ ಮಗನಿಗಾಗಿ ತಮ್ಮ ಉದ್ಯೋಗ ತೊರೆದಿದ್ದರು.

ಜೆರೆಮಿ ಅದೆಷ್ಟು ಬುದ್ಧಿವಂತನಾಗಿದ್ದನೆಂದರೆ ಆತ ಮೂರು ತಿಂಗಳಾಗಿರುವಾಗಲೇ ಅಕ್ಷರಗಳು ಹಾಗೂ ಸಂಖ್ಯೆಗಳನ್ನು ಕಲಿಯಲಾರಂಭಿಸಿದ್ದ. ಒಂದು ವರ್ಷ ಮೂರು ತಿಂಗಳಾಗುವುದರೊಳಗಾಗಿ ಎಲ್ಲಾ ಅಕ್ಷರಮಾಲೆಗಳು ಆತನಿಗೆ ಕರಗತವಾಗಿದ್ದವು. ಆತನಿಗೆ 21 ತಿಂಗಳಾದಾಗ ಇಂಗ್ಲಿಷ್ ಹಾಗೂ ಆತನ ತಾಯಿಯ ಮಾತೃ ಭಾಷೆ ಕೊರಿಯನ್ ಪುಸ್ತಕಗಳನ್ನು ಸಲೀಸಾಗಿ ಓದುತ್ತಿದ್ದ.

ತಮ್ಮ ಈ ಅಪ್ರತಿಮ ಪ್ರತಿಭೆಯ ಪುತ್ರನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆತನ ತಂದೆ ಹ್ಯಾರಿ ಶುಲೆರ್ ವರ್ಗಾವಣೆ ಪಡೆದುಕೊಂಡು ಟೆಕ್ಸಾಸ್ ನಿಂದ ಕಾರ್ನೆಲ್ ವಿಶ್ವವಿದ್ಯಾನಿಲಯವಿರುವ ನ್ಯೂಯಾರ್ಕ್ ನಗರದ ಇಥಾಕಾಗೆ ವಾಸ ಬದಲಾಯಿಸಿದ್ದರು. ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ದೊರಕಿರುವುದರಿಂದ ಅತೀವ ಸಂತಸದಿಂದಿರುವ ಜೆರೆಮಿ, ಮುಂದೆ ಕಠಿಣ ಅಭ್ಯಾಸ ನಡೆಸಬೇಕಾಗುವುದೆಂಬುದರ ಅರಿವು ಹೊಂದಿದ್ದಾನೆ. ಶೈಕ್ಷಣಿಕ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಆತ ಬಯಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News