ಮುಸ್ಲಿಂ ಗ್ರಾಹಕರನ್ನು ಸೆಳೆಯಲು ‘ಹಲಾಲ್’ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಬ್ರ್ಯಾಂಡ್ ಗಳು

Update: 2016-09-02 08:43 GMT

ಜಕಾರ್ತ, ಸೆ.2: ವಿಶ್ವದ ಕೆಲವೊಂದು ಪ್ರತಿಷ್ಠಿತ ಬ್ರ್ಯಾಂಡ್ ಗಳು ‘ಹಲಾಲ್’ ಫೇಸ್ ಕ್ರೀಂ ಹಾಗೂ ಶ್ಯಾಂಪೂಗಳನ್ನು ಇಂಡೋನೇಷ್ಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು ದೇಶದ ಮುಸ್ಲಿಂ ಗ್ರಾಹಕರನ್ನು ಸೆಳೆಯಲು ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ.

ಯುನಿಲಿವರ್, ಬೀಸ್ ಡೊರ್ಫ್ ಮತ್ತು ಲಾರಿಯಲ್ ಇಂತಹ ಹಲಾಲ್ ಉತ್ಪನ್ನಗಳನ್ನು ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ದೇಶಗಳಿಗೆ ಪರಿಚಯಿಸುತ್ತಿರುವ ಕೆಲವು ಕಂಪೆನಿಗಳಾಗಿವೆ.

ಇಂಡೋನೇಷ್ಯದ ಹೊಸ ಲೇಬಲ್ಲಿಂಗ್ ಕಾನೂನಿನಂತೆ ಕಂಪೆನಿಗಳು 2017 ರ ಒಳಗಾಗಿ ತಮ್ಮ ಆಹಾರ ಉತ್ಪನ್ನಗಳು ‘ಹಲಾಲ್’ ಹೌದೋ ಅಥವಾ ಅಲ್ಲವೋ ಎಂದು ನಮೂದಿಸಬೇಕಾಗಿದ್ದು, ಅಂತೆಯೇ 2018 ರ ಒಳಗಾಗಿ ಸೋಪು ಮುಂತಾದ ಉತ್ಪನ್ನಗಳು ಹಾಗೂ 2019 ರೊಳಗಾಗಿ ಔಷಧಗಳು ಹಲಾಲ್ ಹೌದೋ ಅಲ್ಲವೋ ಎಂದು ನಮೂದಿಸಬೇಕಾಗಿದೆ.

ಮುಸ್ಲಿಮರಲ್ಲಿ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಹಲಾಲ್ ಸೌಂ ದರ್ಯ ಸಾಧನೆಗಳಿಗೆ ಬೇಡಿಕೆ ಹೆಚ್ಚುತ್ತವೆ ಎಂದು ಕಂಪೆನಿಗಳು ನಂಬಿವೆ. ಸಣ್ಣ ಕಂಪೆನಿಗಳೂ ಹಲಾಲ್ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮಲೇಷ್ಯಾದ ಮೇಲೆ ಇಂಡೋನೇಷ್ಯಾದ ಹೊಸ ಕಾನೂನು ಪ್ರಭಾವ ಬೀರುವ ಸಾಧ್ಯತೆಯಿದೆ.

ಹಲಾಲ್ ಪ್ರಮಾಣಪತ್ರವೆಂದರೆ ಒಂದು ನಿರ್ದಿಷ್ಟ ಉತ್ಪನ್ನ ಇಸ್ಲಾಮಿಕ್ ಶರೀಯ ಕಾನೂನನ್ನು ಗಮನದಲ್ಲಿರಿಸಿ ಉತ್ಪಾದಿಸಲಾಗಿದೆಯೆಂದರ್ಥ. ಇದರರ್ಥ ಅದರಲ್ಲಿ ಹಂದಿ ಮಾಂಸ, ಮದ್ಯ ಯಾ ರಕ್ತ ಕಾಣಿಸಬಾರದು ಹಾಗೂ ಪರಿಶುದ್ಧವಾಗಿ ಉತ್ಪಾದಿಸಿರಬೇಕು.

ವಿಶ್ವದಾದ್ಯಂತ 150 ಕೋಟಿಗೂ ಹೆಚ್ಚಿನ ಜನಸಂಖ್ಯೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಜಗತ್ತಿನ ಒಟ್ಟು ಜನಸಂಖ್ಯೆಯ ನಾಲ್ಕನೇ ಒಂದಂಶದಷ್ಟಿದೆ. ಹಲಾಲ್ ಸೌಂದರ್ಯ ಸಾಧನಗಳು ವಿಶ್ವದ ಹಲಾಲ್ ಮಾರುಕಟ್ಟೆಯ ಶೇ. 11 ರಷ್ಟನ್ನು ಆಕ್ರಮಿಸಿಕೊಂಡಿದೆ.

ಫ್ರಾನ್ಸ್ ದೇಶದ ಖ್ಯಾತ ಕಾಸ್ಮೆಟಿಕ್ ಕಂಪೆನಿ ಲಾರಿಯಲ್ ಈಗಾಗಲೇ ಇಂಡೋನೇಷ್ಯಾದಲ್ಲಿ ಹಲಾಲ್ ಪ್ರಮಾಣೀಕೃತ ಫ್ಯಾಕ್ಟರಿ ಹೊಂದಿದೆ. ಈ ಕಂಪೆನಿಯ ಹೆಚ್ಚಿನ ಉತ್ಪನ್ನಗಳು- ಗಾರ್ನಿಯರ್ ಫೇಸ್ ವಾಶ್ ನಿಂದ ಹಿಡಿದು ಸ್ಕಿನ್ ಲೈಟನಿಂಗ್ ಕ್ರೀಂಗಳ ತನಕ ಎಲ್ಲವೂ ಹಲಾಲ್ ಪ್ರಮಾಣೀಕೃತವಾಗಿವೆ.

ಹೊಸ ಲೇಬಲ್ಲಿಂಗ್ ಕಾನೂನು ಜಾರಿಯಾದ ನಂತರ ಹಲಾಲ್ ಅಲ್ಲದ ಉತ್ಪನ್ನಗಳು ದೊರೆಯಬಹುದಾದರೂ ಅವುಗಳು ಪ್ರತಿಕೂಲ ವಾತಾವರಣ ಎದುರಿಸಬೇಕಾಗಬಹುದು ಎಂದು ಹೇಳಲಾಗಿದೆ. ಇಂಡೊನೇಷ್ಯಾದ ಹತ್ತು ಖ್ಯಾತ ಸೌಂದರ್ಯವರ್ಧಕ ಬ್ರ್ಯಾಂಡ್ ಗಳ ಪೈಕಿ ಐದು ಬ್ರ್ಯಾಂಡ್ ಗಳನ್ನು ಹೊಂದಿರುವ ಯೂನಿಲಿವರ್ ತನ್ನ ಎಲ್ಲಾ 10 ಫ್ಯಾಕ್ಟರಿಗಳೂ ಹಲಾಲ್ ಗುಣಮಟ್ಟವನ್ನು ಕಾಪಾಡಿವೆಯೆಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News