×
Ad

ನಿಮ್ಮ ಆರೋಗ್ಯ ನಳನಳಿಸುತ್ತಿರಲು ವಾರಕ್ಕೆಷ್ಟು ದಿನ ರಜೆ ಬೇಕು?

Update: 2016-09-02 23:30 IST

 ಒಂದು, ಎರಡರ ಬದಲಾಗಿ ಮೂರು ದಿನ ವಾರಾಂತ್ಯದ ರಜೆ ಲಭಿಸಿದರೆ? ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆ ಹಾಯಾಗಿ ಅಡ್ಡಾಡಬಹುದು, ಕೆಲಸದ ಎಲ್ಲ ಒತ್ತಡಗಳಿಂದ ಸಂಪೂರ್ಣ ಮುಕ್ತರಾಗಬಹುದು. ವರ್ಷಕ್ಕೆ ಅಪರೂಪಕ್ಕೊಮ್ಮೆ ಇಂಥ ಅವಕಾಶ ಸಿಗುವ ಬದಲು ಪ್ರತಿವಾರವೂ ಇಂಥ ಸೌಲಭ್ಯ ಸಿಕ್ಕಿದರೆ ಹೇಗಿರಬಹುದು ಯೋಚಿಸಿ. ಇದು ಕೇವಲ ಕಲ್ಪನೆ ಮಾತ್ರವಲ್ಲ; ಇದು ಕೇವಲ ಮನಸ್ಸಿಗೆ ಮುದ ಕೊಡುವ ದೃಷ್ಟಿಯಿಂದ ಮಾತ್ರವಲ್ಲ; ಪರಿಸರದ ಮೇಲಾಗುವ ವ್ಯತಿರಿಕ್ತ ಪರಿಣಾಮ ತಡೆಗೂ ಇದು ಸುಲಭದ ವಿಧಾನ.

ಕೆಲಸದ ಗಂಟೆ ಕಡಿಮೆಯಾದಷ್ಟೂ, ವಿದ್ಯುತ್ ಬಳಕೆ ಕಡಿಮೆಯಾಗುತ್ತದೆ ಎಂದು ಅರ್ಥಶಾಸ್ತ್ರಜ್ಞ ಡೇವಡಿಡ್ ರೋಸ್‌ನಿಕ್ ಹಾಗೂ ಮಾರ್ಕ್ ವೀಸ್‌ಬರ್ಟ್ ವಾದಿಸುತ್ತಾರೆ. ಶೇಕಡ 20ರಷ್ಟು ವಿದ್ಯುತ್ ಬಳಕೆ ಕಡಿಮೆಯಾದರೆ ಸಹಜವಾಗಿಯೇ ವಾತಾವರಣಕ್ಕೆ ಬಿಡುವ ಇಂಗಾಲದ ಅಂಶ ಕಡಿಮೆಯಾಗುತ್ತದೆ.

ಉದಾಹರಣೆಗೆ ಅಮೆರಿಕದ ಉಥಾಹ್ ರಾಜ್ಯದಲ್ಲಿ ಇಂಥ ಪ್ರಯತ್ನ 2007ರಲ್ಲೇ ನಡೆದಿತ್ತು. ಸೋಮವಾರದಿಂದ ಗುರುವಾರ ವರೆಗೆ ಹೆಚ್ಚುವರಿ ಅವಧಿ ಕೆಲಸ ಮಾಡಿ ಶುಕ್ರವಾರ ಸಂಪೂರ್ಣವಾಗಿ ಕೆಲಸ ಸ್ಥಗಿಸುವುದರಿಂದ 1.8 ದಶಲಕ್ಷ ಡಾಲರ್ ವಿದ್ಯುತ್ ವೆಚ್ಚ ಉಳಿತಾಯವಾಗಿತ್ತು. ಅಂತೆಯೇ ಉದ್ಯೋಗಿಗಳು ಕಚೇರಿಗೆ ಹೋಗಿ ಬರುವಾಗ ಉಂಟಾಗುವ ಇಂಧನ ವ್ಯಯವನ್ನೂ ತಡೆಯಬಹುದು. ಈ ಮೂಲಕ ಇಂಗಾಲ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಅವಕಾಶವಿದೆ.

ನಾಲ್ಕು ದಿನಗಳ ವಾರಕ್ಕೆ ಇನ್ನೂ ಒಂದು ಸಕಾರಣವಿದೆ. ನೀವು ಸದಾ ಲವಲವಿಕೆಯಿಂದ ಇರಬೇಕಾದರೆ, ಕೆಲಸ ಹಾಗೂ ಜೀವನದ ನಡುವೆ ಸಮತೋಲನ ಸಾಧಿಸಬೇಕಾದರೆ, ಮಾನಸಿಕ ಆರೋಗ್ಯ ಹಾಗೂ ದೈಹಿಕ ಕಲ್ಯಾಣದ ದೃಷ್ಟಿಯಿಂದಲೂ ನಾಲ್ಕು ದಿನಗಳ ವಾರ ಅತ್ಯಂತ ಪ್ರಶಸ್ತ. ಇದರಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು, ಮಕ್ಕಳು ಹಾಗೂ ಹಿರಿಯರ ಯೋಗಕ್ಷೇಮ ನೋಡಿಕೊಳ್ಳಲು, ಸಮುದಾಯದ ಜತೆಗೆ ಬೆರೆಯಲೂ ಅವಕಾಶವಾಗುತ್ತದೆ. ಸ್ವೀಡನ್‌ನ ಆಯ್ದ ಕಾರ್ಯಾಗಾರಗಳಲ್ಲಿ ಇದರ ಪರಿಣಾಮವನ್ನು ತಿಳಿಯುವ ಅಧ್ಯಯನ ನಡೆಸಲಾಗಿದ್ದು, ಇದು ರೋಗ ಸಾಧ್ಯತೆ ಕಡಿಮೆ ಮಾಡುವ ಜತೆಗೆ ಉತ್ಪಾದಕತೆ ಹೆಚ್ಚಲೂ ಕಾರಣವಾಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ನಾಲ್ಕು ದಿನಗಳ ವಾರದ ಪರಿಕಲ್ಪನೆ ಆರ್ಥಿಕ, ಸಾಮಾಜಿಕ ಹಾಗೂ ವೈಯಕ್ತಿಕ ನೆಲೆಗಟ್ಟಿನ ದೃಷ್ಟಿಯಿಂದ ನೋಡಿದರೂ ಅನುಸರಿಸಲು ಯೋಗ್ಯವಿಧಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News