×
Ad

ಕಾವೇರಿ ವಿವಾದ: ‘ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ’ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಕಿವಿಮಾತು

Update: 2016-09-02 19:40 IST

ಹೊಸದಿಲ್ಲಿ,ಸೆ.2: ‘ನೀವೂ ಬದುಕಿ,ಇತರರನ್ನೂ ಬದುಕಲು ಬಿಡಿ’ ಎಂದು ಶುಕ್ರವಾರ ಕರ್ನಾಟಕಕ್ಕೆ ಉಪದೇಶಿಸಿದ ಸರ್ವೋಚ್ಚ ನ್ಯಾಯಾಲಯವು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ಪರಿಗಣಿಸುವಂತೆ ಆಗ್ರಹಿಸಿದೆ.
ತಮಿಳುನಾಡಿಗೆ ಎಷ್ಟು ನೀರನ್ನು ಬಿಡುಗಡೆ ಮಾಡಲು ಸಾಧ್ಯ ಎನ್ನುವುದನ್ನು ತನಗೆ ಸೋಮವಾರ ತಿಳಿಸುವಂತೆಯೂ ನ್ಯಾಯಾಲಯವು ಕರ್ನಾಟಕಕ್ಕೆ ಸೂಚಿಸಿತು.
ಜಲವಿವಾದದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕು ಎಂದು ಅದು ಹೇಳಿತು.
ನ್ಯಾಯಾಲಯದಿಂದ ನೇಮಕಗೊಂಡಿರುವ ನ್ಯಾಯಾಧಿಕರಣವು ಸೂಚಿಸಿದ್ದರೂ ಕರ್ನಾಟಕವು ನೀರನ್ನು ಬಿಡುಗಡೆ ಮಾಡದಿರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನೀರು ಬಿಡುಗಡೆಯಲ್ಲಿ ಕೊರತೆಯಿದ್ದಾಗ ತಮಿಳುನಾಡಿಗೆ ನೆರವಾಗುವ ನಿಟ್ಟಿನಲ್ಲಿ ಕರ್ನಾಟಕವು ಏನಾದರೂ ಪ್ರಯತ್ನ ನಡೆಸಬೇಕು ಎಂದು ಪೀಠವು ಹೇಳಿತು.
ತನಗೆ ದೊರೆಯಬೇಕಾದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಲಭಿಸಿದೆ ಎಂದು ದೂರಿಕೊಂಡು ತಮಿಳುನಾಡು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ತನ್ನ ಜಲಾಶಯಗಳಲ್ಲಿ ನೀರಿಲ್ಲವೆಂದು ಕರ್ನಾಟಕವು ವಾದಿಸಿದೆ.
ನ್ಯಾಯಾಧಿಕರಣದ ನಿರ್ಧಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ನೀವು (ಕರ್ನಾಟಕ) ಹೇಳುವಂತಿಲ್ಲ. ನ್ಯಾಯಾಧಿಕರಣವೇ ಸೂತ್ರವನ್ನು ನಿರ್ಧರಿಸಿರುವಾಗ ನೀವು ಅದ್ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ ಎಂದು ನ್ಯಾಯಾಲಯವು ಪ್ರಶ್ನಿಸಿತು.
ಕಾವೇರಿ ನ್ಯಾಯಾಧಿಕರಣದ ನಿರ್ಧಾರದಂತೆ ಕರ್ನಾಟಕವು ಪ್ರತಿ ವರ್ಷ ತಮಿಳುನಾಡಿಗೆ 192 ಸಾವಿರ ಮಿಲಿಯ ಘನ ಅಡಿ ನೀರನ್ನು ಬಿಡುಗಡೆ ಮಾಡಬೇಕು. ಆದರೆ ಈ ವರ್ಷ ತನ್ನ ಮಾಸಿಕ ಕೋಟಾವನ್ನು ಪೂರೈಸಲೂ ರಾಜ್ಯವು ವಿಫಲಗೊಂಡಿದೆ.
ಕರ್ನಾಟಕವು ತನಗೆ ತಕ್ಷಣ 25 ಸಾವಿರ ಮಿಲಿಯ ಘನ ಅಡಿ ನೀರನ್ನು ಬಿಡುಗಡೆಗೊಳಿಸಬೇಕು ಎನ್ನುವುದು ತಮಿಳುನಾಡಿನ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News