ಸಾರ್ವಜನಿಕವಾಗಿ ಮುಜುಗರಕ್ಕೆ ಕಾರಣವಾಗಿರುವ ಡೊಳ್ಳುಹೊಟ್ಟೆಯ ಸಿಬ್ಬಂದಿ ವಿರುದ್ಧ ಸೇನೆ ಕಠಿಣ ಕ್ರಮ

Update: 2016-09-02 14:39 GMT

ಹೊಸದಿಲ್ಲಿ,ಸೆ.2: ತನ್ನ ಸಿಬ್ಬಂದಿಗಳನ್ನು ಕಾಡುತ್ತಿರುವ ಬೊಜ್ಜಿನ ಸಮಸ್ಯೆಯ ವಿರುದ್ಧ ಭೂ ಸೇನೆಯೀಗ ಸಮರ ಸಾರಿದೆ. ಇದಕ್ಕಾಗಿ ನೂತನ ನಿರ್ದೇಶನಗಳನ್ನು ಹೊರಡಿಸಿರುವ ಅದು, ತನ್ನ ಧಡೂತಿ ಸಿಬ್ಬಂದಿಗಳು ಸಮವಸ್ತ್ರದಲ್ಲಿ ಅಸಡ್ಡಾಳವಾಗಿ ಕಾಣುವುದರೊಂದಿಗೆ ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡುತ್ತಿದ್ದಾರೆ ಎಂದು ಹೇಳಿದೆ.

ಕೆಲವು ಸೇನಾಧಿಕಾರಿಗಳ ಸೊಂಟದ ಸುತ್ತಳತೆಯ ಬಗ್ಗೆ ಸರಕಾರದ ಉನ್ನತ ಅಧಿಕಾರಿಗಳ ಟೀಕೆಯಿಂದ ಎಚ್ಚೆತ್ತುಕೊಂಡಿರುವ ಸೇನೆಯ ಕೇಂದ್ರಕಚೇರಿಯು, ಹೆಚ್ಚುತ್ತಿರುವ ಬೊಜ್ಜು ಪ್ರವೃತ್ತಿಯನ್ನು ತಡೆಯಲು ಕಠಿಣ ಕ್ರಮಗಳನ್ನು ಶಿಫಾರಸು ಮಾಡಿದೆ.

ಅಧಿಕಾರಿಗಳಲ್ಲಿ ಬೊಜ್ಜು ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಯುದ್ಧ ಸನ್ನದ್ಧತೆಯ ಮೇಲೆ ವ್ಯತಿರಿಕ್ತ ಪರಿಣಾಮದ ಜೊತೆಗೆ ಕಾಯಿಲೆಗಳಿಗೆ ಕಾರಣವಾಗಿ ಅವರ ಆಯುಷ್ಯವನ್ನೂ ಕುಂದಿಸುತ್ತಿದೆ. ಅಲ್ಲದೆ ಸಮವಸ್ತ್ರದಲ್ಲಿ ಅಸಡ್ಡಾಳವಾಗಿ ಕಾಣಿಸುವ ಮೂಲಕ ಇಂತಹವರು ಸೇನೆಗೆ ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡುತ್ತಿದ್ದಾರೆ ಎಂದು ಅದು ಆ.8ರಂದು ತನ್ನೆಲ್ಲ ಕಮಾಂಡ್‌ಗಳಿಗೆ ರವಾನಿಸಿರುವ ನಿರ್ದೇಶನದಲ್ಲಿ ಹೇಳಿದೆ.

 ಅಧಿಕಾರಿಗಳು ಮತ್ತು ಯೋಧರು ದೇಹತೂಕವನ್ನು ಹೆಚ್ಚಿಸಿಕೊಂಡಿರುವುದು ಕಂಡು ಬಂದರೆ ಅವರನ್ನು ವಾರ್ಷಿಕ ಬೊಜ್ಜು ವೌಲ್ಯಮಾಪನಕ್ಕೊಳಪಡಿಸಲಾಗುವುದು ಮತ್ತು ಅವರ ಚಿತ್ರಗಳನ್ನು ಅವರ ವೌಲ್ಯಮಾಪನ ಕಡತಗಳಿಗೆ ಲಗತ್ತಿಸಲಾಗುವದು.

ಧಡೂತಿ ದೇಹ ಹೊಂದಿರುವ ಸಿಬ್ಬಂದಿಗಳನ್ನು ವಿದೇಶಗಳಲ್ಲಿ ನಿಯೋಜನೆಗೆ, ವೃತ್ತಿಜೀವನದ ಕೋರ್ಸ್‌ಗಳಿಗೆ ಮತ್ತು ‘ಎ’ವರ್ಗದ ನಗರಗಳಿಗೆ ವರ್ಗಾವಣೆಗಳಿಗೆ ಪರಿಗಣಿಸದಿರಲೂ ಸೇನೆಯು ನಿರ್ಧರಿಸಿದೆ.

ಈಗಲೂ ತನ್ನ ಬಿಡುವಿಲ್ಲದ ದಿನಚರಿಯಲ್ಲಿ ಪ್ರತಿ ದಿನ 10 ಕಿ.ಮೀ.ಓಡುವ,ತನ್ನ ದೈಹಿಕ ಕ್ಷಮತೆಗಾಗಿ ಹೆಸರಾಗಿರುವ ಭೂ ಸೇನೆಯ ವರಿಷ್ಠ ದಲ್ಬೀರ್ ಸಿಂಗ್ ಅವರೇ ಖುದ್ದಾಗಿ ಧಡೂತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News