ದೇಶಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Update: 2016-09-02 15:20 GMT

ಹೊಸದಿಲ್ಲಿ,ಸೆ.2: ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ಹತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಶುಕ್ರವಾರದ 24 ಗಂಟೆಗಳ ‘ಭಾರತ ಬಂದ್’ ಕೇರಳದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಬಂದ್ ಸಂಪೂರ್ಣವಾಗಿತ್ತು. ಆದರೆ ಬಂದ್ ಕರೆ ದಿಲ್ಲಿ ಮತ್ತು ಮುಂಬೈಗಳಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ. ಸಾರ್ವಜನಿಕ ಸಾರಿಗೆ ಬಸ್ಸುಗಳು ಎಂದಿನಂತೆ ಸಂಚರಿಸಿದ್ದು,ವಿದ್ಯುತ್ ಮತ್ತು ನೀರು ಪೂರೈಕೆಯಂತಹ ಅಗತ್ಯ ಸೇವೆಗಳಿಗೆ ಯಾವುದೇ ವ್ಯತ್ಯಯವುಂಟಾಗಿರಲಿಲ್ಲ.

ಭಾರತೀಯ ಸ್ಟೇಟ್ ಬ್ಯಾಂಕ್ ಹೊರತುಪಡಿಸಿ ದೇಶಾದ್ಯಂತ ಎಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮುಚ್ಚಿದ್ದವು,ಕೆಲವು ಬ್ಯಾಂಕುಗಳು ತೆರೆದಿದ್ದವಾದರೂ ಸಿಬ್ಬಂದಿಗಳ ಸಂಖ್ಯೆ ವಿರಳವಾಗಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಎಟಿಎಮ್‌ಗಳು ತೆರೆದಿದ್ದು,ಯವುದೇ ವ್ಯತ್ಯಯವುಂಟಾಗಿರಲಿಲ್ಲ.

ದಿಲ್ಲಿ ಸರಕಾರವು ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ(ಎಸ್ಮಾ)ಯನ್ನು ಹೇರಿದ್ದು, 20,000 ನರ್ಸ್‌ಗಳು ಮುಷ್ಕರದಲ್ಲಿ ಭಾಗವಹಿಸಿದ್ದನ್ನು ಕಾನೂನುಬಾಹಿರವೆಂದು ಘೋಷಿಸಿದೆ. ಅವರನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಸರಕಾರದ ನೂತನ ಕಾರ್ಮಿಕ ಮತ್ತು ಹೂಡಿಕೆ ನೀತಿಗಳನ್ನು ವಿರೋಧಿಸಿ ಹಾಗೂ ಹೆಚ್ಚಿನ ವೇತನಕ್ಕೆ ಆಗ್ರಹಿಸಿ ನಡೆದ ಮುಷ್ಕರದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕಾರ್ಮಿಕರು ಭಾಗವಹಿಸಿದ್ದರು ಎಂದು ವರದಿಯು ತಿಳಿಸಿದೆ.

ದಿಲ್ಲಿ ಮತ್ತು ಮುಂಬೈಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಬಂದ್ ಪರಿಣಾಮ ಬೀರಿರಲಿಲ್ಲ. ಆದರೆ ಕೇರಳದಲ್ಲಿ ಹಾಗೂ ಉತ್ತರ ಪ್ರದೇಶ,ಹರ್ಯಾಣಾ ಮತ್ತು ಪಂಜಾಬ್ ರಾಜ್ಯಗಳ ಕೆಲವು ಭಾಗಗಳಲ್ಲಿ ಬಸ್ಸುಗಳು ರಸ್ತೆಗಿಳಿದಿರಲಿಲ್ಲ.

ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಕರ್ತವ್ಯಕ್ಕೆ ಹಾಜರಾಗಿದ್ದ ಸರಕಾರಿ ನೌಕರರಿಗೆ ದುರ್ಗಾ ಪೂಜೆಗೆ ಒಂದು ದಿನದ ಹೆಚ್ಚುವರಿ ರಜೆಯನ್ನು ಘೋಷಿಸಿದ್ದಾರೆ.

ಎಡರಂಗದ ಆಡಳಿತವಿರುವ ಕೇರಳದಲ್ಲಿ ಸರಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸರಕಾರಿ ಬಸ್ಸುಗಳು ರಸ್ತೆಗಿಳಿದಿರಲಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಷ್ಕರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ಕರ್ನಾಟಕದಲ್ಲಿ ಬಂದ್‌ಗೆ ಕಾಂಗ್ರೆಸ್ ಸರಕಾರದ ಪರೋಕ್ಷ ಬೆಂಬಲವಿದ್ದು, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಕೆಲವೇ ಸರಕಾರಿ ಬಸ್ಸುಗಳು ಸಂಚರಿಸಿದ್ದು, ಸಾರ್ವಜನಿಕ ಸಾರಿಗೆ ವ್ಯತ್ಯಯಗೊಂಡಿತ್ತು. ಬೆಂಗಳೂರಿನಲ್ಲಿ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಂದ ಹೆಚ್ಚಿನ ಶುಲ್ಕವನ್ನು ವಸೂಲು ಮಾಡಿದ ಬಗ್ಗೆ ದೂರುಗಳು ಕೇಳಿಬಂದಿವೆ.

ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾದ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಗಣಿಗಾರಿಕೆ ಮುಂದಿನ 50-60 ದಿನಗಳ ಕಾಲ ಸ್ಥಗಿತಗೊಂಡರೂ ವಿದ್ಯುತ್ ಉತ್ಪಾದನಾ ಸ್ಥಾವರಗಳು ಕಾರ್ಯಾಚರಿಸಲು ಸಾಕಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿವೆ ಎಂದು ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News