ಅ.6 ರಿಂದ ರಣಜಿ ಟ್ರೋಫಿ ಆರಂಭ
ಮುಂಬೈ, ಸೆ.2: 83ನೆ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಅಕ್ಟೋಬರ್ 6 ರಂದು ಆರಂಭವಾಗಲಿದ್ದು, ಮುಹ್ಮಮದ್ ಕೈಫ್ ನಾಯಕತ್ವದ ಛತ್ತೀಸ್‌ಗಢ ತಂಡ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆಗೈಯ್ಯಲಿದೆ.
‘ಸಿ’ ಗುಂಪಿನಲ್ಲಿ 10ನೆ ತಂಡವಾಗಿ ಸೇರ್ಪಡೆಯಾಗಿರುವ ಛತ್ತೀಸ್‌ಗಢ ರಾಂಚಿಯಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ತ್ರಿಪುರಾವನ್ನು ಎದುರಿಸಲಿದೆ. ಕರ್ನಾಟಕ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಈ ವರ್ಷದಿಂದ ರಣಜಿ ಟ್ರೋಫಿಯ ನಡುವೆ ವಿಜಯ್‌ಹಝಾರೆ ಏಕದಿನ ಟ್ರೋಫಿ ಹಾಗೂ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯು ನಡೆಯುವುದಿಲ್ಲ. ರಣಜಿ ಟ್ರೋಫಿಯ ಬಳಿಕವೇ ಈ ಎರಡೂ ಟೂರ್ನಿಯು ಆರಂಭವಾಗುತ್ತದೆ.
ಮಾಜಿ ನಾಯಕ ಸೌರವ್ ಗಂಗುಲಿ ನೇತೃತ್ವದ ಬಿಸಿಸಿಐ ತಾಂತ್ರಿಕ ಸಮಿತಿಯ ಶಿಫಾರಸಿನ ಮೇರೆಗೆ 2016-17 ಋತುವಿನ ರಣಜಿ ಪಂದ್ಯಗಳು ತಟಸ್ಥ ತಾಣಗಳಲ್ಲಿ ನಡೆಯುವುದು. ಕ್ವಾರ್ಟರ್‌ಫೈನಲ್ ಡಿ.17-21, ಸೆಮಿಫೈನಲ್ ಡಿಸೆಂಬರ್ 27 ರಂದು ನಡೆಯಲಿದೆ. ಫೈನಲ್ ಪಂದ್ಯ 2017ರ ಜನವರಿ 7 ರಿಂದ 11ರ ತನಕ ನಡೆಯಲಿದೆ. ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನವೀಕರಣ ಕಾರ್ಯ ನಡೆಯುತ್ತಿರುವ ಕಾರಣ ಈ ವರ್ಷದ ರಣಜಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ.
ಈ ವರ್ಷ ಬೆಳಗಾವಿ ಹಾಗೂ ರಾಯ್‌ಪುರದಲ್ಲಿ ಮೊದಲ ಬಾರಿ ಪಂದ್ಯ ನಡೆಯುವುದು.