ಬಿ.ಸಿ.ರೋಡ್‌ನಲ್ಲಿ ವಾಹನಗಳಿಗೆ ದಂಡ, ಅಂಗಡಿ ಮಾಲಕರಿಗೆ ಎಚ್ಚರಿಕೆ!

Update: 2016-09-03 07:15 GMT

ಬಂಟ್ವಾಳ, ಸೆ.3: ಅಗಲೀಕರಣಗೊಂಡ ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ದಂಡ ವಿಧಿಸುವ ಕಾರ್ಯಾಚರಣೆಗಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಸರಕು ಸಾಮಾನುಗಳನ್ನು ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲಕರಿಗೂ ಕಾನೂನು ಕ್ರಮದ ಎಚ್ಚರಿಕೆ ನೀಡಿದರು. ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿನ ನಿತ್ಯ ಸಮಸ್ಯೆಯನ್ನು ಮನಗಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಾಸೆ ಇತ್ತೀಚೆಗೆ ಖುದ್ದು ಇಲ್ಲಿಗೆ ಭೇಟಿ ನೀಡಿ ಸರ್ವೀಸ್ ರಸ್ತೆಯನ್ನು ಪರಿಶೀಲನೆ ನಡೆಸಿದ್ದರು. ವಾಹನಗಳ ಸುಗಮ ಸಂಚಾರಕ್ಕಾಗಿ ಬಂಟ್ವಾಳ ಟ್ರಾಫಿಕ್ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದ ಅವರು, ವಾರದೊಳಗೆ ಸರ್ವೀಸ್ ರಸ್ತೆಯನ್ನು ಅಗಲಗೊಳಿಸಿ ಡಾಮರು ಮಾಡುವಂತೆ ಸೂಚಿಸಿದ್ದರು. ಎಸ್ಪಿಯ ಸೂಚನೆಯ ಮೇರೆಗೆ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಖುದ್ದು ಮುಂದೆ ನಿಂತು ಸರ್ವೀಸ್ ರಸ್ತೆಯನ್ನು ಅಗಲಗೊಳಿಸಿದ್ದರಲ್ಲದೆ ರಸ್ತೆಗೆ ಜಲ್ಲಿ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಆಗುವಂತೆ ಕ್ರಮ ಕೈಗೊಂಡಿದ್ದರು. ಆದರೆ ಅಗಲಗೊಂಡ ಸರ್ವೀಸ್ ರಸ್ತೆಯಲ್ಲಿ ಆಟೊರಿಕ್ಷಾ, ಕಾರು ಸೇರಿದಂತೆ ಇತರ ಖಾಸಗಿ ವಾಹನಗಳ ಚಾಲಕರು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿ ತಮ್ಮ ಕೆಲಸ ಕಾರ್ಯಕ್ಕೆ ತೆರಳುತ್ತಿದ್ದರು. ಅಲ್ಲದೆ ಸರ್ವೀಸ್ ರಸ್ತೆಗೆ ತಾಗಿಕೊಂಡಿರುವ ಅಂಗಡಿಗಳ ಮಾಲಕರು ಸರಕು ಸಾಮಾನುಗಳನ್ನಿಟ್ಟು ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದರು. ಇದರಿಂದಾಗಿ ರಸ್ತೆ ಅಗಲೀಕರಣಗೊಂಡರೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಕ್ಕಿರಲಿಲ್ಲ. ಇದು ಟ್ರಾಫಿಕ್ ಪೊಲೀಸರಿಗೆ ಇನ್ನಷ್ಟು ತಲೆ ನೋವಾಗಿ ಪರಿಣಮಿಸಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಪೊಲೀಸ್ ಇಲಾಖೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಸ್ತೆಗೆ ತಾಗಿಕೊಂಡಿರುವ ಅಂಗಡಿಗಳ ಮಾಲಕರಿಗೆ ರಸ್ತೆಯಲ್ಲಿ ಸರಕು ಸಾಮಾನುಗಳನ್ನಿಡದಂತೆ ಮತ್ತು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವ ವಾಹನಗಳ ಚಾಲಕರಿಗೆ ಹಲವು ಬಾರಿ ಟ್ರಾಫಿಕ್ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ಈ ಯಾವುದೇ ಸೂಚನೆ ಪಾಲನೆಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು ಅಂಗಡಿ ಮಾಲಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಇನ್ನು ಮುಂದು ರಸ್ತೆಯಲ್ಲಿ ಸಾಮಾನುಗಳನ್ನು ಇಟ್ಟಲ್ಲಿ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿದರು. ಅಲ್ಲದೆ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದ್ದ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ದಂಡ ವಸೂಲಿ ಮಾಡಿದರು. ಕಾರ್ಯಾಚರಣೆಯಲ್ಲಿ ನಗರ ಠಾಣೆ ಎಸ್ಸೈ ನಂದಕುಮಾರ್, ಟ್ರಾಫಿಕ್ ಎಸ್ಸೈಗಳಾದ ಚಂದ್ರಶೇಖರಯ್ಯ, ರತನ್ ಕುಮಾರ್ ಹಾಗೂ ಅವರ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News