ರಾಮಕೃಷ್ಣ ಮಠದಲ್ಲಿ ‘ಮೇಧಾ’ ವಿಚಾರಗೋಷ್ಠಿ

Update: 2016-09-03 07:41 GMT

ಮಂಗಳೂರು, ಸೆ.3: ಅಮೆರಿಕಾದ ಶಿಕಾಗೋದಲ್ಲಿ 1893ರ ಸೆ.11ರಂದು ನಡೆದಿದ್ದ ಸರ್ವಧರ್ಮ ಸಮ್ಮೇಳನದ ನೆನಪಿಗಾಗಿ ನಗರದ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ 3 ದಿನಗಳ ಕಾರ್ಯಕ್ರಮದಲ್ಲಿ ಮೂರನೆ ದಿನವಾದ ಇಂದು ಬೆಳಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಮೇಧಾ’ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಗೆ ಚಾಲನೆ ನೀಡಿದ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಉಪಯೋಗಿಸಿಕೊಂಡು ಸ್ವಾವಲಂಬಿ ಉದ್ಯೋಗಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಒಲಿಪಿಂಕ್‌ನಲ್ಲಿ ಚಿನ್ನದ ಪದಕಗಳನ್ನು ಎಲ್ಲರೂ ಬಯಸುತ್ತಾರೆ. ಆದರೆ ಮಕ್ಕಳನ್ನು ಮಾತ್ರ ವೈದ್ಯರು, ಇಂಜಿನಿಯರ್ ಮಾಡಲು ಹಾತೊರೆಯುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆಯುವುದಾದರೂ ಹೇಗೆ ಎಂಬ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಸ್ವಚ್ಛ ಭಾರತ ಮಿಶನ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ, ರಾಮಕೃಷ್ಣ ಮಠ ಈ ನಿಟ್ಟಿನಲ್ಲಿ ಕೈಗೊಳ್ಳುತ್ತಿರು ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಸ್ವಚ್ಛತೆಯ ಕಲ್ಪನೆ ಕೇವಲ ಮನದಲ್ಲಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮನೋಭಾವ ನಮ್ಮಲ್ಲಿರಬೇಕು. ಜತೆಗೆ ಮನಸ್ಸು ಸ್ವಚ್ಛತೆಯ ಮೂಲಕ ಸಮಾಜದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು. ದಿಕ್ಸೂಚಿ ಭಾಷಣ ಮಾಡಿದ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ, ಆತ್ಮವಿಶ್ವಾಸ ಹೊಂದಿರುವ ಜ್ಞಾನವಂತ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆ, ಸವಾಲುಗಳನ್ನು ಎದುರಿಸಲು ಸಮರ್ಥನಾಗಿರುತ್ತಾನೆ ಎಂದರು. ವೇದಿಕೆಯಲ್ಲಿ ಪ್ರೊ.ಕೆ.ರಘೋತ್ತಮ ರಾವ್, ಸ್ವಾಮಿ ಬೋಧಮಯನಂದಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News