ಶಿಕ್ಷಕರು ಜಿಲ್ಲಾ ಪ್ರಗತಿಯ ನಿಜವಾದ ರೂವಾರಿಗಳು: ಸಚಿವ ಪ್ರಮೋದ್

Update: 2016-09-03 10:25 GMT

ಉಡುಪಿ, ಸೆ.3: ಅವಿಭಜಿತ ದ.ಕ. ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಲು ಶಿಕ್ಷಣವೇ ಮೂಲ ಕಾರಣ. ಹೀಗಾಗಿ ಅಭಿವೃದ್ಧಿಯ ಕೀರ್ತಿ ಇಲ್ಲಿನ ಶಿಕ್ಷಕರಿಗೆ ಸಲ್ಲಬೇಕೆ ಹೊರತು ರಾಜಕಾರಣಿಗಳಿಗಲ್ಲ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಧರ್ಮಪ್ರಾಂತದ ಕೆಥೊಲಿಕ್ ಎಜುಕೇಶನಲ್ ಸೊಸೈಟಿ ವತಿಯಿಂದ ಉಡುಪಿ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣದಲ್ಲಿ ಉಡುಪಿ ಜಿಲ್ಲೆ ರಾಜ್ಯದ ಇತರ ಜಿಲ್ಲೆಗಳಿಂತ ಮೂಂಚೂಣಿಯಲ್ಲಿರಲು ಇಲ್ಲಿನ ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳ ಕೊಡುಗೆ ಅಪಾರ. ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಸೂಚ್ಯಂಕದಲ್ಲಿ ಈ ಎರಡು ಜಿಲ್ಲೆಗಳ ಶೇ.100 ಗ್ರಾಪಂಗಳು ಸರಾಸರಿಗಿಂತ ಮೇಲೆ ಇವೆ. ಇಲ್ಲಿನ ಪ್ರಗತಿಯು ಯುರೋಪ್ ಹಾಗೂ ಅಮೆರಿಕ ದೇಶಗಳ ಅಭಿವೃದ್ಧಿಗೆ ಸಮಾನವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಧರ್ಮಪ್ರಾಂತದ ಧರ್ಮಾಧ್ಯಕ್ಷ ಹಾಗೂ ಸೊಸೈಟಿಯ ಅಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ರಾಮಚಂದ್ರ ಬಿ.ನಾಯಕ್, ಸೊಸೈಟಿಯ ನಿರ್ದೇಶಕ ಫಾ.ಲಾರೆನ್ಸ್ ಡಿಸೋಜ, ಶಾಲಾ ಸಂಚಾಲಕ ಫಾ.ಫ್ರೆಡ್ ಮಸ್ಕರೇನಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧನೆಗೈದ ಅಧ್ಯಾಪಕರಾದ ಪ್ರಕಾಶ್ ಅನಿಲ್ ಕ್ಯಾಸ್ತರಿನೋ, ವಿನ್ಸೆಂಟ್ ಆಳ್ವ, ವಂ.ಮಹೇಶ್ ಡಿಸೋಜರನ್ನು ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಅತ್ಯಧಿಕ ಫಲಿತಾಂಶ ಗಳಿಸಿದ ಶಿಕ್ಷಣ ಸಂಸ್ಥೆಗಳನ್ನು ಗೌರವಿಸಲಾಯಿತು. ಸುರೇಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News