ಶಬರಿಮಲೆಯಲ್ಲಿ ಸ್ತ್ರೀಯರ ಪ್ರವೇಶಕ್ಕೆ ಬಿಜೆಪಿ ನಾಯಕ ಸುರೇಂದ್ರನ್ ಒಲವು

Update: 2016-09-03 12:51 GMT

ತಿರುವನಂತಪುರ,ಆ.3: ಪ್ರಸಿದ್ಧ ಶಬರಿಮಲೆ ಕ್ಷೇತ್ರಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಬೆಂಬಲವನ್ನು ವ್ಯಕ್ತಪಡಿಸಿರುವ ಕೇರಳ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಅವರು, ಶ್ರೀ ಅಯ್ಯಪ್ಪ ದೇವರು ‘ಸ್ತ್ರೀ ದ್ವೇಷಿ’ಯಲ್ಲ ಮತ್ತು ಋತುಚಕ್ರವು ಪ್ರಕೃತಿ ನಿಯಮವಾಗಿದ್ದು,ಅದನ್ನು ‘ಪವಿತ್ರ’ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ವಾರ್ಷಿಕ ಯಾತ್ರಾ ಋತು(ನವೆಂಬರ್-ಜನವರಿ)ವಿನಲ್ಲಿ ಯಾತ್ರಿಕರ ಭಾರೀ ದಟ್ಟಣೆಯನ್ನು ತಗ್ಗಿಸಲು ವರ್ಷವಿಡೀ ಶಬರಿಮಲೆ ದೇವಸ್ಥಾನದ ಬಾಗಿಲನ್ನು ತೆರೆದಿರಿಸಬೇಕು ಎಂಬ ಅಭಿಪ್ರಾಯವನ್ನೂ ಸುರೇಂದ್ರನ್ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬೆಂಬಲಿಸಿದ್ದಾರೆ.

ಅಯ್ಯಪ್ಪ ದೇವರು ನೈಷ್ಠಿಕ ಬ್ರಹ್ಮಚಾರಿ ಹೌದು.ಆದರೆ ಅದರರ್ಥ ಆತ ಸ್ತ್ರೀದ್ವೇಷಿ ಎಂದಲ್ಲ. ಸನ್ನಿಧಾನದಲ್ಲಿ ದೇವಿ ಮಲ್ಲಿಕಪ್ಪುರಮ್‌ಗೆ ಅಯ್ಯಪ್ಪ ಸ್ವಾಮಿ ತನ್ನ ಪಕ್ಕದಲ್ಲಿಯೇ ಆಸನ ನೀಡಿರುವುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಋತುಚಕ್ರವು ಪ್ರಕೃತಿ ನಿಯಮವಾಗಿದೆ. ಅದರಿಂದಾಗಿಯೇ ಮಾನವ ಜನಾಂಗ ಅಸ್ತಿತ್ವದಲ್ಲಿದೆ. ಹೀಗಾಗಿ ಅದೊಂದು ಪವಿತ್ರ ಪ್ರಕ್ರಿಯೆ ಎಂದು ನಾವು ಪರಿಗಣಿಸಬೇಕು ಎಂದ ಅವರು,ತರ್ಕಬದ್ಧವಾಗಿರುವ ಪ್ರತಿಯೊಂದನ್ನೂ ಹಿಂದು ಸಮುದಾಯವು ಸದಾ ಒಪ್ಪಿಕೊಳ್ಳುತ್ತಲೇ ಬಂದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News