ವಿಯೆಟ್ನಾಂಗೆ 3,328 ಕೋಟಿ ರೂ. ಸಾಲ
ಹನೋಯ್, ಸೆ. 3: ವಿಯೆಟ್ನಾಂ ತನ್ನ ರಕ್ಷಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಸಾಧ್ಯವಾಗುವಂತೆ ಭಾರತವು ಆ ದೇಶಕ್ಕೆ 500 ಮಿಲಿಯ ಡಾಲರ್ (ಸುಮಾರು 3,328 ಕೋಟಿ ರೂಪಾಯಿ) ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವಿಯೆಟ್ನಾಂಗೆ ಭಾರತ ನೀಡುತ್ತಿರುವ ಈ ಸಹಾಯ ಮಹತ್ವ ಪಡೆದುಕೊಂಡಿದೆ. ಸಂಪೂರ್ಣ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಸಾಧಿಸುತ್ತಿರುವ ಪ್ರಭುತ್ವವನ್ನು ವಿಯೆಟ್ನಾಂ ಪ್ರಶ್ನಿಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಪ್ರಾದೇಶಿಕ ಸವಾಲುಗಳಿಗೆ ನೀಡುವ ಪ್ರತಿಕ್ರಿಯೆಯಲ್ಲಿ ಸಹಕಾರ ಇರಬೇಕಾದ ಅಗತ್ಯವನ್ನು ನಾವು ಗುರುತಿಸಿದ್ದೇವೆ. ಈ ವಲಯದ ಎರಡು ಮಹತ್ವದ ರಾಷ್ಟ್ರಗಳ ನೆಲೆಯಲ್ಲಿ, ಸಮಾನ ಕಳವಳದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳಲ್ಲಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ಬೆಸೆಯುವ ಅಗತ್ಯವನ್ನೂ ನಾವು ಮನಗಂಡಿದ್ದೇವೆ’’ ಎಂದು ಮೋದಿ ಹೇಳಿದರು.
ಮೋದಿಯ ವಿಯೆಟ್ನಾಂ ಪ್ರವಾಸದ ವೇಳೆ, ಉಭಯ ದೇಶಗಳ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅದರಲ್ಲಿ 500 ಮಿಲಿಯ ಡಾಲರ್ ಸಾಲ ಒಪ್ಪಂದವೂ ಇದೆ. ಹೆಚ್ಚಿನ ಒಪ್ಪಂದಗಳು ಉಭಯ ದೇಶಗಳ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಕಾರಗಳಿಗೆ ಸಂಬಂಧಿಸಿದ್ದಾಗಿದೆ.
ಇಡೀ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುತ್ತಿರುವ ಹಕ್ಕನ್ನು ನೆರೆಯ ವಿಯೆಟ್ನಾಂ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಪ್ರದೇಶ ಬೆಂಕಿ ಚೆಂಡಿನ ಮೇಲೆ ಕುಳಿತಂತಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಕ್ಕೆ ಐತಿಹಾಸಿಕ ಹಕ್ಕಿಲ್ಲ ಎಂಬುದಾಗಿ ಜುಲೈಯಲ್ಲಿ ಹೇಗ್‌ನಲ್ಲಿರುವ ವಿಶ್ವಸಂಸ್ಥೆ ಬೆಂಬಲಿತ ಅಂತಾರಾಷ್ಟ್ರೀಯ ಪಂಚಾಯಿತಿ ನ್ಯಾಯಾಲಯ ತೀರ್ಪು ನೀಡಿತ್ತು.
ಫಿಲಿಪ್ಪೀನ್ಸ್ ಸಲ್ಲಿಸಿದ ದೂರಿನ ಆಧಾರದಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮಂಡಳಿ ಅಂತಿಮವಾಗಿ ಫಿಲಿಪ್ಪೀನ್ಸ್ ಪರವಾಗಿ ತೀರ್ಪು ನೀಡಿದೆ.
ಆದರೆ, ಈ ತೀರ್ಪನ್ನು ತಿರಸ್ಕರಿಸಿರುವ ಚೀನಾ, ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಹಕ್ಕನ್ನು ಪುನರುಚ್ಚರಿಸಿದೆ.
ತೀರ್ಪಿನ ಬಳಿಕ, ಈ ವಿವಾದದಲ್ಲಿ ಒಳಗೊಂಡಿರುವ ವಿಯೆಟ್ನಾಂ, ಫಿಲಿಪ್ಪೀನ್ಸ್, ಬ್ರೂನೈ ಮತ್ತು ಮಲೇಶ್ಯಗಳನ್ನು ಚೀನಾ ‘‘ನಪುಂಸಕರು’’ ಮತ್ತು ‘‘ಕಾಗದದ ಹುಲಿಗಳು’’ ಎಂಬುದಾಗಿ ಬಣ್ಣಿಸಿದೆ ಹಾಗೂ ಹೇಗ್ ನ್ಯಾಯಮಂಡಳಿಯ ತೀರ್ಪು ‘‘ಅಕ್ರಮ ಮತ್ತು ಹಾಸ್ಯಾಸ್ಪದ’’ ಎಂಬುದಾಗಿ ಹೇಳಿದೆ.