ಆರೆಸ್ಸೆಸ್ ನಿಂದ ದೂರ ಇರುವಂತೆ ಎಚ್ಚರಿಸಿದ ಇಂಗ್ಲೆಂಡ್ ನ ಚಾರಿಟಿ ಕಮಿಷನ್
ಲಂಡನ್, ಸೆ. 3: ಆರ್‌ಎಸ್‌ಎಸ್‌ನಿಂದ ಅಂತರ ಕಾಪಾಡಿಕೊಳ್ಳುವಂತೆ ಬ್ರಿಟನ್‌ನಲ್ಲಿರುವ ಹಿಂದೂ ದತ್ತಿ ಸಂಸ್ಥೆಯೊಂದಕ್ಕೆ ಬ್ರಿಟನ್‌ನ ದತ್ತಿ ಸಂಸ್ಥೆಗಳ ಕಾವಲು ಸಂಸ್ಥೆ ‘ಚಾರಿಟಿ ಕಮಿಶನ್’ ಶುಕ್ರವಾರ ಸೂಚನೆ ನೀಡಿದೆ.
ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಯೊಬ್ಬನು ಶಿಬಿರವೊಂದರಲ್ಲಿ ಮಾಡಿದ ಭಾಷಣದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಮಾತಾಡಿರುವುದು ಸ್ಟಿಂಗ್ ಕಾರ್ಯಾಚರಣೆಯೊಂದರಲ್ಲಿ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಅದು ಈ ಕ್ರಮ ತೆಗೆದುಕೊಂಡಿದೆ.
ಶಿಬಿರವೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವೇಳೆ ಈ ಬೋಧಕನು ಮುಸ್ಲಿಮ್ ವಿರೋಧಿ ಮತ್ತು ಕ್ರೈಸ್ತ ವಿರೋಧಿ ಹೇಳಿಕೆಗಳನ್ನು ನೀಡಿರುವುದು ಗುಪ್ತ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿರುವ ಚಾರಿಟಿ ಕಮಿಶನ್ ‘ಹಿಂದೂ ಸ್ವಯಂಸೇವಕ್ ಸಂಘ’ (ಎಚ್‌ಎಸ್‌ಎಸ್-ಯುಕೆ)ಕ್ಕೆ ಈ ಎಚ್ಚರಿಕೆ ರವಾನಿಸಿದೆ.
ಈ ಭಾಷಣಕಾರನ ಮೇಲೆ ಪರಿಣಾಮಕಾರಿ ನಿಗಾ ಇಡುವಲ್ಲಿ ವಿಫಲವಾಗಿರುವ ದತ್ತಿ ಸಂಸ್ಥೆಯ ಆಡಳಿತದಲ್ಲಿ ದೋಷವಿದೆ ಎಂಬು ನಿರ್ಧಾರಕ್ಕೆ ಆಯೋಗ ಬಂದಿದೆ. ಆದಾಗ್ಯೂ, ಬೋಧಕನು ವ್ಯಕ್ತಪಡಿಸಿದ ನಿಲುವುಗಳು ಎಚ್‌ಎಸ್‌ಎಸ್‌ನ ನೀತಿಯಾಗಿದೆ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳ ಕೊರತೆಯಿದೆ ಎಂಬ ನಿರ್ಧಾರಕ್ಕೆ ಅದು ಬಂದಿದೆ.
ದತ್ತಿ ಸಂಸ್ಥೆ ಮತ್ತು ಆರ್‌ಎಸ್‌ಎಸ್‌ನ ನಡುವಿನ ಸಂಬಂಧಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳಲ್ಲಿ ಎಚ್‌ಎಸ್‌ಎಸ್‌ನ ಟ್ರಸ್ಟೀಗಳನ್ನು ಕಮಿಶನ್ ಪ್ರಶ್ನಿಸಿದೆ.
‘‘ ‘ಎಚ್‌ಎಸ್‌ಎಸ್ ಆರ್‌ಎಸ್‌ಎಸ್‌ಗೆ ಧನ ಸಹಾಯ ಮಾಡುವುದೂ ಇಲ್ಲ ಹಾಗೂ ಅದರಿಂದ ನಿಧಿ ಪಡೆಯುವುದೂ ಇಲ್ಲ’ ಎನ್ನುವುದು ಟ್ರಸ್ಟೀಗಳು ನೀಡಿದ ಉತ್ತರವಾಗಿತ್ತು. ಈ ಎರಡು ಸಂಸ್ಥೆಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿವೆ ಹಾಗೂ ಪರಸ್ಪರರಿಂದ ಸ್ವತಂತ್ರವಾಗಿವೆ’’ ಎಂದು ವರದಿ ತಿಳಿಸಿದೆ.
ಹಾರ್ಡ್‌ಕ್ಯಾಶ್ ಪ್ರೊಡಕ್ಷನ್ಸ್ ತಯಾರಿಸಿದ ‘ಚಾರಿಟೀಸ್ ಬಿಹೇವಿಂಗ್ ಬ್ಯಾಡ್ಲಿ’ ಎಂಬ ಸಾಕ್ಷಚಿತ್ರವೊಂದು ಬ್ರಿಟನ್‌ನ ಐಟಿವಿ ನೆಟ್‌ವರ್ಕ್‌ನಲ್ಲಿ ಫೆಬ್ರವರಿ 18ರಂದು ಪ್ರಸಾರವಾಗಿತ್ತು. ಅದರಲ್ಲಿ ಹಿಯರ್‌ಫೋರ್ಡ್‌ಶಯರ್‌ನಲ್ಲಿರುವ ಎಚ್‌ಎಸ್‌ಎಸ್ ಯುವ ಶಿಬಿರವೊಂದರಲ್ಲಿ ಬೋಧಕನೊಬ್ಬ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇತರ ಧರ್ಮಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವುದು ಕಂಡು ಬಂದಿದೆ.