ಉಝ್ಬೆಕ್: ಇಸ್ಲಾಮ್ ಕರಿಮೊವ್ ಅಂತ್ಯಕ್ರಿಯೆ
ಸಮರ್‌ಕಂಡ್ (ಉಝ್ಬೆಕಿಸ್ತಾನ), ಸೆ. 3: ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟಿರುವ ಉಝ್ಬೆಕಿಸ್ತಾನದ ಅಧ್ಯಕ್ಷ ಇಸ್ಲಾಮ್ ಕರಿಮೊವ್‌ರ ಅಂತ್ಯಕ್ರಿಯೆ ಇಂದು ಭಾರೀ ಭದ್ರತೆಯ ನಡುವೆ ನಡೆಯಿತು.
78 ವರ್ಷದ ‘ಉಕ್ಕಿನ ಮನುಷ್ಯ’ನ ಖಚಿತ ಉತ್ತರಾಧಿಕಾರಿಯಾಗಿ ಯಾರೂ ಹೊರಹೊಮ್ಮದಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಸೋವಿಯತ್ ನಂತರದ ಇತಿಹಾಸದಲ್ಲೇ ಅತ್ಯಂತ ಅನಿಶ್ಚಿತ ಪರಿಸ್ಥಿತಿ ನೆಲೆಸಿದೆ.
ಕಳೆದ ಶನಿವಾರ ಮೆದುಳಿನ ರಕ್ತಸ್ರಾವಕ್ಕೀಡಾಗಿದ್ದ ಕರಿಮೊವ್, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅಧಿಕಾರಿಗಳು ಅವರ ಸಾವನ್ನು ಶುಕ್ರವಾರ ರಾತ್ರಿ ಘೋಷಿಸಿದರು. ಇದಕ್ಕೂ ಮುನ್ನ, ದೇಶದ ಮುಖ್ಯಸ್ಥನ ಸಾವಿನ ಸುದ್ದಿಯನ್ನು ಘೋಷಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹಲವು ದಿನಗಳಿಂದ ಕೇಳಿಬರುತ್ತಿದ್ದವು.
ಮಾಜಿ ಸೋವಿಯತ್ ಒಕ್ಕೂಟದ ದೇಶವನ್ನು 27 ವರ್ಷಗಳ ಕಾಲ ಆಳಿದ ಬಲಾಢ್ಯನ ಅಂತ್ಯ ಸಂಸ್ಕಾರವನ್ನು ನೈರುತ್ಯ ಉಝ್ಬೆಕಿಸ್ತಾನದಲ್ಲಿರುವ ಅವರ ಸ್ವಗ್ರಾಮ ಸಮರ್‌ಕಂಡ್‌ನಲ್ಲಿ ಶನಿವಾರ ನಡೆಯಿತು.
ಅವರ ಸಾವಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ನಡೆಸಲಾಗುತ್ತಿದೆ.
ರಾಜಧಾನಿ ತಾಶ್ಕೆಂಟ್‌ನಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಒಯ್ದೆಗ ಜನರು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಹೂವುಗಳನ್ನು ಎಸೆದರು.
ರಶ್ಯ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್, ಮಾಜಿ ಸೋವಿಯತ್ ರಿಪಬ್ಲಿಕ್‌ಗಳ ನಾಯಕರಾದ ತಜಿಕಿಸ್ತಾನದ ಅಧ್ಯಕ್ಷ ಎಮೊಮಲಿ ರಖ್‌ಮಾನ್, ತುರ್ಕ್‌ಮೆನಿಸ್ತಾನದ ಅಧ್ಯಕ್ಷ ಗುರುಬಂಗುಲಿ ಬರ್ಡಿಮುಖಮೆಡೊವ್ ಹಾಗೂ ಕಿರ್ಗಿಸ್ತಾನ್, ಬೆಲಾರುಸ್ ಮತ್ತು ಕಝಕ್‌ಸ್ತಾನ್‌ಗಳ ಪ್ರಧಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಉಝ್ಬೆಕ್ ಕಾನೂನಿನ ಪ್ರಕಾರ, ಚುನಾವಣೆ ನಡೆಯುವವರೆಗೆ ಸೆನೆಟ್ ಮುಖ್ಯಸ್ಥ ನಿಗ್ಮತುಲ್ಲಾ ಯುಲ್ಡಶೆವ್ ದೇಶದ ಉಸ್ತುವಾರಿ ಅಧ್ಯಕ್ಷರಾಗಿರುತ್ತಾರೆ.