ಕಾಶ್ಮೀರ: ಫೋಟೊ ಜರ್ನಲಿಸ್ಟ್‌ಗಳ ಮೇಲೆ ಪೊಲೀಸರಿಂದ ಹಲ್ಲೆ ಆರೋಪ
Update: 2016-09-03 23:45 IST
ಶ್ರೀನಗರ,ಸೆ.3: ನಗರದ ಬಾಟಾಮಲೂ ಪ್ರದೇಶದಲ್ಲಿ ತನ್ನ ಕೆಲವು ಸದಸ್ಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಸ್ಥಳೀಯ ಫೋಟೊ ಜರ್ನಲಿಸ್ಟ್ ಗಳ ಸಂಘವು, ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮವನ್ನು ಕೈಗೊಳ್ಳದಿದ್ದರೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆಯೊಡ್ಡಿದೆ.
ಕರ್ಫ್ಯೂ ಜಾರಿಯಲ್ಲಿರುವ ಬಾಟಾಮಲೂ ಪ್ರದೇಶದಲ್ಲಿ ವೃತ್ತಿ ಸಂಬಂಧಿ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದ ಡಝನ್ನಿಗೂ ಅಧಿಕ ಪತ್ರಕರ್ತರು ತಮ್ಮ ಬಳಿಯಿದ್ದ ಕರ್ಫ್ಯೂ ಪಾಸ್‌ಗಳನ್ನು ತೋರಿಸಿದರೂ ಅದನ್ನೊಪ್ಪದ ಪೊಲೀಸರು ಅವರನ್ನು ಥಳಿಸಿದ್ದಾರೆ ಎಂದು ಸಂಘದ ವಕ್ತಾರರು ಶನಿವಾರ ಇಲ್ಲಿ ಆರೋಪಿಸಿದರು.
ಫೋಟೊ ಜರ್ನಲಿಸ್ಟ್‌ಗಳು ಹಲ್ಲೆಯನ್ನು ಪ್ರತಿಭಟಿಸಿ ಧರಣಿ ನಡೆಸಿದ್ದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಶ್ರೀನಗರ ಎಸ್‌ಎಸ್‌ಪಿ ಅಮಿತ್ ಕುಮಾರ್ ಅವರು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದೆಗೆದುಕೊಂಡರು.