ಅಜಾಗರೂಕತೆಯಿಂದ ಆತನ ನಿಶ್ಚಿತಾರ್ಥದ ದಿನವೇ ಬದುಕಿನ ಕೊನೆಯ ದಿನವಾಯಿತು!
ಹೊಸದಿಲ್ಲಿ , ಸೆ.4: ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮವಾಗಿ ಯುವ ಉದ್ಯಮಿಯೊಬ್ಬರು ನಿಶ್ಚಿತಾರ್ಥದ ದಿನವೇ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮಿತಿಮೀರಿದ ವೇಗದಲ್ಲಿ ಬಿಎಂಡಬ್ಲ್ಯು ಕಾರು ಚಲಾಯಿಸಿದ ಪರಿಣಾಮ ಕೇಂದ್ರ ದೆಹಲಿಯ ಒಬೆರಾಯ್ ಹೋಟೆಲ್ ಬಳಿ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಯಿತು ಎಂದು ಪೊಲೀಸರು ಹೇಳಿದ್ದಾರೆ.
ನಿರ್ಮಾಣ ಸಂಸ್ಥೆಯೊಂದರ ಮುಖ್ಯಸ್ಥ ಅಭಿಜಿತ್ ಸಿಂಗ್ ಮೃತಪಟ್ಟ ದುರ್ದೈವಿ. ಡಿಫೆನ್ಸ್ ಕಾಲೋನಿಯಿಂದ ಮಾಡೆಲ್ ಟೌನ್ ಕಡೆಗೆ ಹೋಗುತ್ತಿದ್ದಾಗ ಮುಂಜಾನೆ 5ರ ವೇಳೆಗೆ ಈ ದುರ್ಘಟನೆ ನಡೆದಿದೆ. ಫ್ಲೈಓವರ್‌ನ ಗ್ರಿಲ್‌ಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿತು. ಸಿಂಗ್, ಬ್ಯಾಚುಲರ್ ಪಾರ್ಟಿ ಮುಗಿಸಿ, ನಸುಕಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಅಡ್ಡಾದಿಡ್ಡಿಯಾಗಿ ಓಡಿದ ಕಾರು 50 ಮೀಟರ್ ಉರುಳಿಕೊಂಡು ಹೋಯಿತು. ಕಾರಿನ ಮೇಲ್ಭಾಗ ನಜ್ಜುಗುಜ್ಜಾಗಿದ್ದು, ಬಾಗಿಲುಗಳು ಅಪ್ಪಚ್ಚಿಯಾಗಿರುವುದು ಘಟನೆಯ ತೀವ್ರತೆಯನ್ನು ತೋರಿಸುತ್ತಿತ್ತು. ಅಕ್ಕಪಕ್ಕದವರು ನೆರವಿಗೆ ಧಾವಿಸಿದರು. ಸೀಟ್‌ಬೆಲ್ಟ್ ಬಿಡಿಸಿ ಸಿಂಗ್ ದೇಹವನ್ನು ಕಾರಿನಿಂದ ಹೊರಕ್ಕೆ ತೆಗೆಯಲಾಯಿತು. ಮೂಲಚಂದ್ ಆಸ್ಪತ್ರೆಗೆ ತಕ್ಷಣ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು.