ಒಂದೇ ದಿನಪತ್ರಿಕೆಯ ಎರಡು ಆವೃತ್ತಿಗಳಲ್ಲಿ ಒಂದೇ ವಿಷಯದ ಬಗ್ಗೆ ಎರಡು ತದ್ವಿರುದ್ಧ ಹೇಳಿಕೆಗಳು! ಏನಿದರ ಹಕೀಕತ್ತು?

Update: 2016-09-04 07:49 GMT

ವಾಷಿಂಗ್ಟನ್, ಸೆ.4: ವಾಲ್‌ಸ್ಟ್ರೀಟ್ ಜರ್ನಲ್‌ನ ಸೆಪ್ಟೆಂಬರ್ 1ರ ಸಂಚಿಕೆ ಓದಿದ ಅಮೆರಿಕನ್ನರಿಗೆ ಅಚ್ಚರಿ ಕಾದಿತ್ತು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಗೆಗಿನ ಒಂದೇ ಸುದ್ದಿಗೆ ಪತ್ರಿಕೆಯ ಎರಡು ವಿಭಿನ್ನ ಆವೃತ್ತಿಗಳಲ್ಲಿ ತದ್ವಿರುದ್ಧ ಹೇಳಿಕೆಗಳು ಪ್ರಕಟವಾಗಿರುವುದು ಓದುಗರನ್ನು ದಂಗುಬಡಿಸಿತು.
ಮುಂಜಾನೆ ಪ್ರಕಟವಾದ ಮೊದಲ ಆವೃತ್ತಿಯ ಶೀರ್ಷಿಕೆಯಲ್ಲಿ, ಮೆಕ್ಸಿಕೋ ಅಧ್ಯಕ್ಷ ಎನ್ರಿಕ್ ಮೆನಾ ನೀಟೊ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ವಲಸೆ ಬಗೆಗಿನ ತಮ್ಮ ನಿಲುವನ್ನು ಟ್ರಂಪ್ ಸಡಿಲಿಸಿದ್ದಾರೆ ಎಂದು ಹೇಳಲಾಗಿತ್ತು. ಅದೇ ಪತ್ರಿಕೆ ಅದೇ ದಿನದ ಇನ್ನೊಂದು ಆವೃತ್ತಿಯಲ್ಲಿ ಟ್ರಂಪ್, ವಲಸೆ ಕುರಿತ ತಮ್ಮ ನಿಲುವು ಬಿಗಿಗೊಳಿಸಿದ್ದಾರೆ ಎಂದು ಪ್ರಕಟಿಸಲಾಗಿತ್ತು.
ಇದರ ಹಿಂದೆ ಬಲುದೊಡ್ಡ ಸಂಚು ಅಡಗಿದೆ ಎಂದು ಹೇಳಲಾಗುತ್ತಿದೆ. ಬೇರೆ ಬೇರೆ ಪ್ರದೇಶದ ಜನತೆಗೆ ನೀಡುವ ಆವೃತ್ತಿಗಳಲ್ಲಿ ಉದ್ದೇಶಪೂರ್ವಕವಾಗಿ ಈ ಶೀರ್ಷಿಕೆಗಳನ್ನು ನೀಡಲಾಗಿದೆ. ಟ್ರಂಪ್ ಅವರ ಮತಗಳನ್ನು ಕಸಿಯುವ ಸಲುವಾಗಿ ಈ ಹುನ್ನಾರ ನಡೆದಿದೆ ಎಂದು ಹೇಳಲಾಗುತ್ತಿದೆ.
ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಚರ್ಚೆಗಳಲ್ಲಿ, ಟ್ರಂಪ್ ಅವರ ಪರವಾಗಿರುವ ಪ್ರದೇಶಕ್ಕೆ ನೀಡಿದ ಪತ್ರಿಕೆಯಲ್ಲಿ ಟ್ರಂಪ್ ತಮ್ಮ ನಿಲುವು ಸಡಿಲಿಸಿದ್ದಾರೆ ಎಂದು ಶೀರ್ಷಿಕೆ ನೀಡುವ ಮೂಲಕ ರಿಪಬ್ಲಿಕನ್ ಪಕ್ಷದ ಮತದಾರರನ್ನು ತಿರುಗಿಸುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಟ್ರಂಪ್ ವಿರೋಧಿ ಸ್ಥಳಗಳಲ್ಲಿ ಪ್ರಸಾರವಾಗುವ ಪತ್ರಿಕೆಗಳಿಗೆ, ಟ್ರಂಪ್ ನಿಲುವು ಬಿಗಿಗೊಳಿಸಿದ್ದಾರೆ ಎಂದು ಹೇಳುವ ಮೂಲಕ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರಿಗೆ ಮತ ತಿರುಗಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ.
ಆದರೆ ಪತ್ರಿಕೆಯ ಸಂವಹನ ವಿಭಾಗ ಸ್ಪಷ್ಟನೆ ನೀಡಿ ಇದನ್ನು ಅಲ್ಲಗಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News