ಭಾರತ ಅತ್ಯಂತ ಶ್ರೀಮಂತ ದೇಶ, ಆದರೆ ಭಾರತೀಯರು ಬಡವರು !

Update: 2016-09-04 16:34 GMT


 

ಹೊಸದಿಲ್ಲಿ, ಸೆ.4: ರಷ್ಯಾ ಹೊರತುಪಡಿಸಿದರೆ ಇಡೀ ವಿಶ್ವದಲ್ಲೇ ಅಧಿಕ ಅಸಮಾನತೆ ಇರುವ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ಭಾರತದ ಸಂಪತ್ತಿನ ಶೇ.50ರಷ್ಟು ಪಾಲು ಹತ್ತು ಲಕ್ಷ ಡಾಲರ್‌ಗಳಿಗಿಂತ ಅಧಿಕ ಸಂಪತ್ತು ಹೊಂದಿರುವ ಶ್ರೀಮಂತರ ಹಿಡಿತದಲ್ಲಿ ಇದೆ ಎನ್ನುವುದನ್ನು ವರದಿಯೊಂದು ಬಹಿರಂಗಪಡಿಸಿದೆ.
ನ್ಯೂ ವರ್ಲ್ಡ್ ವೆಲ್ತ್ ಸಂಸ್ಥೆ ನಡೆಸಿದ ಅಧ್ಯಯನ ಈ ಅಂಶವನ್ನು ಬಹಿರಂಗಗೊಳಿಸಿದೆ. ಬಾರತದ ಒಟ್ಟು ಸಂಪತ್ತಿನ ಶೇ.54ರಷ್ಟು ಭಾಗ ಮಿಲಿಯಾಧಿಪತಿಗಳ ಕೈಯಲ್ಲಿದೆ ಎಂದು ವರದಿ ಹೇಳಿದೆ. ವಿಶ್ವದ ಹತ್ತು ಅತ್ಯಂತ ಶ್ರೀಮಂತ ದೇಶಗಳ ಪೈಕಿ ಭಾರತವೂ ಸ್ಥಾನ ಪಡೆದಿದ್ದು, ಭಾರತದ ಒಟ್ಟು ಸಂಪತ್ತಿನ ವೌಲ್ಯ 5,600 ಶತಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಆದರೆ ಸರಾಸರಿ ಗಣನೆಗೆ ತೆಗೆದುಕೊಂಡರೆ ಭಾರತೀಯರು ಬಡವರಾಗಿಯೇ ಇದ್ದಾರೆ ಎನ್ನುವುದು ವರದಿಯಿಂದ ತಿಳಿದುಬಂದಿದೆ.
ಜಾಗತಿಕ ಮಟ್ಟದಲ್ಲಿ ರಷ್ಯಾದಲ್ಲಿ ಮಿಲಿಯನೇರ್‌ಗಳ ಕೈಯಲ್ಲಿ ಶೇ.62ರಷ್ಟು ಸಂಪತ್ತು ಕ್ರೋಢೀಕರಣವಾಗಿದೆ. ಈ ಅಸಮಾನತೆಯನ್ನು ಅಳೆಯಲು ಸಂಸ್ಥೆ, ಅತ್ಯಧಿಕ ಸಂಪತ್ತು ಹೊಂದಿರುವ ವ್ಯಕ್ತಿಗಳ ಹಿಡಿತದಲ್ಲಿರುವ ಸಂಪತ್ತನ್ನು ಗಣನೆಗೆ ತೆಗೆದುಕೊಂಡಿದೆ. ಹೆಚ್ಚಿನ ಸಂಖ್ಯೆಯ ಮಿಲಿಯಾಧಿಪತಿಗಳಿದ್ದರೆ ಹೆಚ್ಚು ಅಸಮಾನತೆ ಹೊಂದಿದೆ ಎಂಬ ಅರ್ಥ. ಒಂದು ದೇಶದ ಸಂಪತ್ತಿನ ಅರ್ಧದಷ್ಟು ಪಾಲು ಮಿಲಿಯಾಧಿಪತಿಗಳೇ ಇದ್ದರೆ, ಅಲ್ಲಿ ಮಧ್ಯಮ ವರ್ಗ ಇರಲು ಸಾಧ್ಯವೇ ಇಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ ಜಪಾನ್ ಅತ್ಯಂತ ಸಮಾನತೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್‌ನ ಮಿಲಿಯಾಧಿಪತಿಗಳು ಕೇವಲ ಶೇ.22ರಷ್ಟು ಸಂಪತ್ತಿನ ಮೇಲೆ ಮಾತ್ರ ಹಿಡಿತ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಪ್ರಮಾಣ ಶೇ.28ರಷ್ಟಿದೆ. ಆದರೆ ಅಚ್ಚರಿ ಎಂದರೆ ಅಮೆರಿಕದಲ್ಲಿ ಶೇ.32 ರಷ್ಟು ಸಂಪತ್ತು ಮಾತ್ರ ಮಿಲಿಯನೇರ್‌ಗಳ ವಶದಲ್ಲಿದೆ. ಬಹುತೇಕ ಪತ್ರಿಕಾ ವರದಿಗಳು ಅಮೆರಿಕದಲ್ಲಿ ವ್ಯಾಪಕ ಪ್ರಮಾಣದ ಅಸಮಾನತೆ ಇದೆ ಎಂದು ವರದಿ ಮಾಡಿದ್ದವು. ಇಂಗ್ಲೆಂಡ್‌ನಲ್ಲಿ ಶೇ.35ರಷ್ಟು ಪಾಲು ಮಿಲಿಯನೇರ್‌ಗಳ ಬಳಿ ಇದೆ.
ಶತಕೋಟ್ಯಧಿಪತಿಗಳ ಸಂಪತ್ತನ್ನು ಗಣನೆಗೆ ತೆಗೆದುಕೊಂಡರೂ ರಷ್ಯಾ ಅಗ್ರಸ್ಥಾನಿಯಾಗಿದೆ. ದೇಶದ ಶೇ.26 ಪಾಲು ಸಂಪತ್ತು ಇವರ ಹಿಡಿತದಲ್ಲಿದೆ. ಜಪಾನ್‌ನಲ್ಲಿ ಈ ಪ್ರಮಾಣ ಶೇ.3ರಷ್ಟು ಮಾತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News