ಬಿಟ್ಟೆನೆಂದರೂ ಬಿಡದೀ...
ಒಂದೇ ಒಂದು ಚಿರತೆಯು ಬೆನ್ನಟ್ಟಿದಾಗ ನೂರಾರು ಜಿಂಕೆಗಳು ಪ್ರಾಣಭಯದಿಂದ ದಿಕ್ಕಾಪಾಲಾಗಿ ನಾಗಾಲೋಟದಲ್ಲಿ ಓಡುವುದನ್ನು ತೆರೆಯ ಮೇಲೆ ನೋಡಿದ್ದೇವೆ. ಅವುಗಳಲ್ಲಿ ಕೆಲವಾದರೂ ಜಿಂಕೆಗಳು ತಿರುಗಿ ನಿಂತು ತಮ್ಮ ವಿಶಾಲ ಕೊಂಬುಗಳಿಂದ ಚಿರತೆಯನ್ನು ತಿವಿಯಲು ಅಟ್ಟಿಸಿಕೊಂಡು ಬಂದಿದ್ದರೆ ಚಿರತೆಯು ತನ್ನ ಜೀವ ರಕ್ಷಣೆಗಾಗಿ ಕಂಬಿ ಕೀಳುತ್ತಿತ್ತು, ಎಂಬ ಅರಿವು ಆ ಮುಗ್ಧ ಜಿಂಕೆಗಳಿಗಿಲ್ಲ. ಎಲ್ಲಿಯವರೆಗೂ ಈ ಅರಿವು ಜಿಂಕೆಗಳಿಗೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಪ್ರತಿ ದಿನವೂ ಕೊಂದು ತಿನ್ನುವುದನ್ನೇ ತನ್ನ ಪರಿಪಾಠವಾಗಿಸಿಕೊಂಡ ಚಿರತೆಗೆ ಅದು ಪ್ರಕೃತಿ ಧರ್ಮವೆನಿಸುತ್ತದೆ. ಆದರೆ ತಮ್ಮ ಕೆಲಸವನ್ನು ಒಂದೇ ವಾರ ನಿಲ್ಲಿಸಿದರೂ ಇಡೀ ಊರು ದುರ್ಗಂಧಮಯವಾಗಿ ಕೊಳೆಯುತ್ತದೆಂಬ ಅರಿವು ಸತ್ತ ದನಗಳನ್ನು ವಿಲೇವಾರಿ ಮಾಡುವವರಿಗೆ, ಚರ್ಮ ಸುಲಿಯುವವರಿಗೆ ಹಾಗೂ ಪೌರಕಾರ್ಮಿಕರಿಗೂ ಇದೆ. ಅವರಿಗಷ್ಟೇ ಅಲ್ಲ ಅವರ ಶೌಚ ವೃತ್ತಿಗೆ ಇಂಬು ನೀಡುವ ನಾಗರಿಕರಿಗೂ ಈ ಅರಿವಿದೆ. ಹೀಗಿದ್ದೂ ಸಹ ಮನುಷ್ಯರಿಂದ ಇಂತಹ ಕೆಲಸಗಳನ್ನು ಮಾಡಿಸಬಾರದೆಂಬ ವಿಶ್ವಪ್ರಜ್ಞೆ ಶೋಷಕರಿಗೆ ಶತಮಾನಗಳಿಂದಲೂ ಸಾಧ್ಯವಾಗಿಲ್ಲ. ನ್ಯಾಯಶೂನ್ಯ ಹಾಗೂ ನೀತಿಬಾಹಿರ ಶೋಷಣೆಯೇ ದೇಶದ ಸಾಮಾಜಿಕ ಜೀವಾಳ ಎಂದು ಭಾವಿಸಿರುವ ಶೋಷಕವರ್ಗವು ಶೌಚವೃತ್ತಿಯ ಹಾಗೂ ಅಶುಚಿ ಎನ್ನಲಾಗುವ ವಸ್ತುಗಳೊಂದಿಗೆ ವೃತ್ತಿ ಮಾಡುವ ಬೃಹತ್ ಸಮುದಾಯಗಳಿಗೆ ಮತ್ತು ಅವರ ಪೀಳಿಗೆಗೆ ಬದಲಿ ವೃತ್ತಿಯನ್ನು ಕೈಗೊಳ್ಳದಂತೆ ನಿಷೇಧಗಳ ದಿಗ್ಭಂದನ ಹೇರಿದ್ದುದರಿಂದ ಅವರಿಗೆ ಪರ್ಯಾಯ ಉದ್ಯೋಗವೆಂಬುದು ಸಾಧ್ಯವಿಲ್ಲದ ಸಂಗತಿಯಾಗಿತ್ತು. ಆದರೆ ಇಂದು ಪರಿಸ್ಥಿತಿ ಕಿಂಚಿತ್ತೂ ಬದಲಾಗಿಲ್ಲ ಎನ್ನುವಂತಿಲ್ಲ. ಇತ್ತೀಚಿನ ಮುಕ್ತ ಆರ್ಥಿಕತೆಯ ಸಂದರ್ಭದಲ್ಲಿ ಶೌಚವೃತ್ತಿಯವರು, ಸತ್ತ ದನ ಎತ್ತುವವರು, ಚರ್ಮ ಸುಲಿಯುವವರು ತಮ್ಮ ವೃತ್ತಿಗಳನ್ನು ತೊರೆದು, ಆದಾಯ, ಅಂತಸ್ತುಗಳನ್ನು ಪರಿಗಣಿಸದೆ ಅಶುಚಿಯಲ್ಲದ ಪರ್ಯಾಯ ಉದ್ಯೋಗಗಳನ್ನು ಮಾಡಬಹುದಿತ್ತು. ಸ್ವಚ್ಛತೆಗೆ ಸಂಬಂಸಿದ ಎಲ್ಲ ವೃತ್ತಿಗಳನ್ನು, ಸತ್ತ ಪ್ರಾಣಿಗಳನ್ನು ಸಾಗಿಸುವುದನ್ನು, ಅವುಗಳ ಚರ್ಮ ಸುಲಿಯವುದನ್ನು ಯಂತ್ರಗಳು ಮಾಡಲಿ. ಆ ಯಂತ್ರಗಳನ್ನು ಎಲ್ಲ ಜಾತಿಗಳವರು ನಡೆಸಲಿ. ಶೂದ್ರ ವರ್ಗವೆಲ್ಲ ಹುಟ್ಟಿರುವುದೇ ಪುರೋಹಿತಶಾಹಿಯ ಸೇವೆ ಮಾಡಲು ಎಂದು ನಂಬುವ ನೀತಿಭ್ರಷ್ಟ ನಿಲುವಿನ ಕಣ್ಣೆದುರಲ್ಲಿಯೇ ಅಶುದ್ಧ ವಸ್ತುಗಳ ಕಾಯಕವಂತರು ಇನ್ನಷ್ಟು ಭದ್ರವಾಗಿ ಆ ವೃತ್ತಿಗಳಿಗೆ ಅಂಟಿಕೊಂಡು ಬಂದಿರುವುದೇ ದೊಡ್ಡ ವಿಪರ್ಯಾಸ. ಎಂತಹ ವಿಷಮ ಸ್ಥಿತಿಯಲ್ಲೂ ಅವರು ಹಾಗೆ ಮಾಡದೆ ಕ್ಕರಿಸಿ ಹೊರ ಬಂದಿದ್ದಲ್ಲಿ ಜಾತ್ಯತೀತ ವಾದಕ್ಕೆ ಒಂದು ಮಹತ್ತರ ಕೊಡುಗೆಯಾಗುತ್ತಿತ್ತು. ಇಂದಿನ ಪ್ರಜಾತಂತ್ರದಲ್ಲಿಯೂ ಜಾತಿ ವ್ಯವಸ್ಥೆ ಉಳಿದು ಬರಲು, ಅದು ಇನ್ನಷ್ಟು ಮತ್ತಷ್ಟು ಬಲಗೊಳ್ಳಲು ಪುರೋಹಿತ ಶಾಹಿಯಷ್ಟೇ ಸಮಾನ ಕಾರಣರು ಅಶುಚಿ ಕಾಯಕವಂತರೂ ಹೌದು. ಮೀಸಲಾತಿ ಕೂಡ ಮುಂದುವರಿಯುತ್ತಿರಲು ಇವರ ಅಶುಚಿ ವಸ್ತುಗಳ ವೃತ್ತಿಯೂ ಒಂದು ಕಾರಣವಾಗಿದೆ. ಪ್ರಗತಿಯ ಸೂಚ್ಯಂಕಗಳೆಲ್ಲ ಅನುಷ್ಠಾನದಲ್ಲಿ ಗರಿಷ್ಠ ಮಟ್ಟ ತಲುಪಿದರೆ ಮೀಸಲಾತಿಯ ಅಗತ್ಯವಿರುವುದಿಲ್ಲ. ಆದರೆ ಮೀಸಲಾತಿ ಪ್ರಯೋಜನವನ್ನೇ ಪುರುಷಾರ್ಥ ಸಾಧನೆ ಎಂದು ಭ್ರಮಿಸಿರುವ ಮುಗ್ಧರು ಮತ್ತು ಹಾಗೆಂದು ನಂಬಿಸಿರುವ, ಬಿಂಬಿಸಿರುವ ಚಾಣಾಕ್ಷ ವಲಯಗಳು ತಮ್ಮ ಬಾಹುಬಲ ಬಾಯಿಬಲ ಹಾಗೂ ಥೈಲಿಬಲಗಳ ಆಡಳಿತದಲ್ಲಿ ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿ ಅನುಷ್ಠಾನಗೊಳ್ಳದಂತೆ ಕಾಯ್ದುಕೊಳ್ಳುತ್ತವೆ. ಎಂದರೆ ಚರ್ಮ ಸುಲಿಯುವವರು ಸುಲಿಯುತ್ತಲೇ ಇರಬೇಕು, ಸತ್ತ ದನಗಳನ್ನು ಸಾಗಿಸುವವರು ಸಾಗಿಸುತ್ತಲೇ ಇರಬೇಕು. ಈ ಮೂಲಕ ಮತಬ್ಯಾಂಕುಗಳು ಮುಕ್ಕಾಗದೇ ಅಕ್ಷಯವಾಗಿರಬೇಕು. ಒಂದು ಜಾತಿ ಅತ್ಯುನ್ನತ ಎನಿಸಿಕೊಳ್ಳುವುದು ಅತಿ ಕನಿಷ್ಠ ಎಂಬ ಇನ್ನೊಂದು ಜಾತಿಯನ್ನು ತನ್ನ ಮಾನದಂಡವನ್ನಾಗಿ ಅತ್ಯಂತ ಕೆಳಗಿನ ಕನಿಷ್ಠ ಸ್ಥಾನದಲ್ಲಿ ಇರಿಸಿಕೊಂಡಾಗ. ‘ಅತಿ ಕನಿಷ್ಠ’ ಇಲ್ಲವೆಂದರೆ ಅತಿ ಶ್ರೇಷ್ಠವೂ ಇಲ್ಲ. ಪ್ರತಿಭೆಯಿಂದ ಮೇಲು ಎನಿಸಿಕೊಳ್ಳುವವರಿಗೆ ಈ ದುಷ್ಕೃತ್ಯ ಅನ್ವಯವಾಗುವುದಿಲ್ಲ. ರೋಗಾಣುಗಳಿಂದಲೇ ರೋಗ ಪ್ರತಿರೋಧಕ ಔಷಧವೂ ತಯಾರಾದಂತೆ ಇಲ್ಲಿ ಅತಿ ಕನಿಷ್ಠರೇ ಅತಿ ಶ್ರೇಷ್ಠರ ಆಯುಷ್ಯ ರಕ್ಷಕರಾಗಿ ಪರಿವರ್ತನೆಗೊಳ್ಳುತ್ತಾರೆ. ಅತೀಶ್ರೇಷ್ಠರು ಉಂಡು ಬಿಟ್ಟ ಎಂಜಲೆಲೆಯಲ್ಲಿ ಉರುಳಾಡಿದರೆ ತಮಗೆ ಹೆಚ್ಚಿನ ಪುಣ್ಯ ಶ್ರೇಯಸ್ಸು, ಮೋಕ್ಷ ಎಂದು ಮುಂತಾಗಿ ನಂಬುವ ಭ್ರಮಾೀನ, ಭಯಗ್ರಸ್ಥ ಮನಸ್ಸುಗಳು ಮಡೆ ಸ್ನಾನದ ನಿಷೇಧವನ್ನೂ ಸ್ವಯಂ ಪ್ರತಿಭಟಿಸುತ್ತವೆ. ಬಿಹಾರದಲ್ಲಿ ಭಂಗಿ ಜಾತಿಯವರಲ್ಲಿ ಅತಿ ಹೆಚ್ಚು ಶೌಚಾಲಯಗಳನ್ನು ಸ್ವಚ್ಛಮಾಡುವವನೇ ಶ್ರೀಮಂತ ಹಾಗೂ ಅವರ ನಾಯಕ! ಹೆಣ್ಣಿಗೆ ತನ್ನ ಶೀಲ, ಮಾನ, ಗೌರವಗಳೇ ಆಕೆಯ ಹಾಗೂ ಸಂಭಾವಿತ ಮನುಷ್ಯ ಕುಲದ ಪರಮ ಮೌಲ್ಯ. ಆಡು ಮಾತಿನ ಸಣ್ಣ ಬೈಗಳು ಸಹ ಹೆಣ್ಣಿಗೆ ಇಂದು ಲೈಂಗಿಕ ದೌರ್ಜನ್ಯವಾಗುತ್ತದೆ. ಇಂತಹ ಅಮೂಲ್ಯ ಮೌಲ್ಯಗಳನ್ನು ಮುಕ್ತ ಮಾರುಕಟ್ಟೆಗೆ ತೆರೆದು ಇಟ್ಟಂತೆ ‘ದೇವದಾಸಿ’, ‘ಬಸವಿ’ ಯಂತಹ ಮಾನಕಗಳ ಮೂಲಕ ಇಲ್ಲಿನ ವ್ಯವಸ್ಥೆಯು ಹೆಣ್ಣನ್ನು ಮಾರಾಟ ಮಾಡಿದೆ. ನಿಷೇಧದ ಪ್ರಯತ್ನಗಳನ್ನು ಚಂದ್ರಗುತ್ತಿಯಂತಹ ಪ್ರಕರಣಗಳಲ್ಲಿ ಈ ಮಾನಕಗಳೇ ಪ್ರತಿಭಟಿಸಿದವು! ಜಾತಿ ಒಂದು ಅವೈಜ್ಞಾನಿಕ, ಮನುಷ್ಯ ವಿರೋ ಹಾಗೂ ಜೀವ ವಿರೋ ಮೌಢ್ಯವೆಂದು ರುಜುವಾತು ಪಡಿಸಿ ಅದರ ಸಹಜಾತ ಉತ್ಪನ್ನವಾದ ಅಸ್ಪಶ್ಯತೆಯ ವಿರುದ್ಧ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರಗಳೇ ಸೂಕ್ತ ಪರಿಹಾರವೆಂದು ಪ್ರತಿಪಾದಿಸಿದ್ದ ಅಂಬೇಡ್ಕರರಿಗೆ ರ್ಯಾಮ್ಸೆ ಮ್ಯಾಕ್‌ಡೋನಾಲ್ಡ್ ಅವರ ಕಮ್ಯೂನಲ್ ಅವಾರ್ಡ್ ಮೂಲಕ ಇದು ಸಾಧ್ಯವಾಗಿತ್ತು. ಆದರೆ ಇದೇ ವ್ಯವಸ್ಥೆಯು ಗಾಂೀಜಿಯವರ ಆಮರಣಾಂತ ಉಪವಾಸದ ಪ್ರತಿಪಟ್ಟಿನ ಮೂಲಕ ಇಕ್ಕಟ್ಟಿನ ಸಂಕಟಕ್ಕೆ ಸಿಲುಕಿಸಿ ಶೋಷಿತರು ಹಿಂದೂ ಪರಿಯಾಚೆ ಹೋಗದಂತೆ ಜಾತಿ ವ್ಯವಸ್ಥೆಯನ್ನು ಬೆಂಬಲಿಸುವಂತಹ ‘ಪೂನಾ ಒಪ್ಪಂದ’ಕ್ಕೆ ಸಹಿ ಮಾಡಿಸಿತು. 1970ರ ದಶಕದಲ್ಲಿ ಭಾರತದ ಬೆಲ್ಚಿ, ಪಿಪರಾ, ಾರಸ್‌ಭಿಗಾ, ಕಿಲ್ವಮಣಿ ಮೊದಲಾದ ಊರುಗಳಲ್ಲಿ ಈ ಅತೀ ಕನಿಷ್ಠರ ಮಾರಣ ಹೋಮವನ್ನು ಶ್ರೇಷ್ಠರ ಪಡೆ ನಡೆಸಿತು. ಮೀಸಲಾತಿ ವಿರೋ ಚಳವಳಿಯ ಹೆಸರಿನಲ್ಲಿ ಗಾಂನಾಡು ಗುಜರಾತಿನಲ್ಲಿ ಶ್ರೇಷ್ಠರು ಈ ಅತಿ ಕನಿಷ್ಠರ ನರಮೇಧವನ್ನೇ ನಡೆಸಿದರು. ಬಸವಳಿದ ದಲಿತರು 1980-81ರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ತಮಿಳುನಾಡಿನ ಮೀನಾಕ್ಷಿಪುರದಲ್ಲಿ ಮತಾಂತರಗೊಂಡರು. ತಮ್ಮ ಮೇಲಿನ ದೌರ್ಜನ್ಯಕ್ಕೆ ಪ್ರತಿಭಟನೆಯಾಗಿ ಪ್ರಾಯಶ: ಇದೇ ಮೊದಲ ಸಲ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಚಿರತೆಗೆ ಜಿಂಕೆಗಳು ಸೆಡ್ಡು ಹೊಡೆದವು. ಮರುಕ್ಷಣವೇ ‘ಮರಳಿ ಮಾತೃ ಮತ’ಕ್ಕೆ ಎಂಬ ಅಭಿಯಾನವನ್ನು ಶ್ರೇಷ್ಠರು ನಡೆಸಿದರು. ಈಗ ಮತ್ತೆ ಇತಿಹಾಸ ಮರುಕಳಿಸಿ ಒಬ್ಬ ದಯಾಶಂಕರ್ ಸಿಂಗ್, ಒಬ್ಬ ಮಾಜಿ ಮುಖ್ಯ ದಲಿತ ಮಹಿಳಾ ಮಂತ್ರಿಯನ್ನು ವೇಶ್ಯೆಗೆ ಹೋಲಿಸುತ್ತಾನೆ. ಅದೇ ಶ್ರೇಷ್ಠರ ಪಡೆಯು ಅದೇ ಗುಜರಾತಿನ ಗಿರ್-ಸೋಮನಾಥ ಜಿಲ್ಲೆಯ ಉನಾದಲ್ಲಿ ಈ ಮುಗ್ಧರ ಮೇಲೆ ಜುಲೈ 11 ರಂದು ದೌರ್ಜನ್ಯದ ಮೊದಲ ಪ್ರಯತ್ನವನ್ನು ನಡೆಸಿದೆ. ಸಾರ್ವಜನಿಕವಾಗಿ ಅವಮಾನಕರವಾಗಿ ಥಳಿಸುವ ಬರ್ಬರ ದೃಶ್ಯಗಳನ್ನು ದೇಶದ ಮುಂದಿರಿಸಿದೆ. ಆಗ ಹತ್ತಿರದಲ್ಲಿಯೇ ಕರ್ತವ್ಯದಲ್ಲಿದ್ದ ಆರಕ್ಷಕರು ರಕ್ಷಣೆಯನ್ನು ಕೈಬಿಟ್ಟ ಅರಾಜಕತೆಯಂತು ಸುಸ್ಪಷ್ಟ. ಈ ಘಟನೆಯಿಂದ ರೊಚ್ಚಿಗೆದ್ದ ದಲಿತರು ಸಬರಮತಿ ಪ್ರದೇಶದಲ್ಲಿ ಬೃಹತ್ ರ್ಯಾಲಿ ನಡೆಸಿದ್ದಾರೆ. ಇನ್ನು ಭವಿಷ್ಯದಲ್ಲಿ ಎಂದೂ ಸಹ ಸತ್ತ ಪ್ರಾಣಿಗಳನ್ನು ಎತ್ತುವ, ಅವುಗಳ ಚರ್ಮ ಸುಲಿಯುವ ಹಾಗೂ ಶೌಚದ ವೃತ್ತಿಯನ್ನು ಇನ್ನೆಂದೂ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾರೆ. ಅದರ ಜೊತೆಯಲ್ಲಿಯೇ ಅನೇಕ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಸಾಯಿ ಕರ್ಮಚಾರಿಗಳ ಉದ್ಯೋಗವನ್ನು ಖಾಯಂಗೊಳಿಸಬೇಕು ಹಾಗೂ ಸತ್ತ ದನಗಳ ಚರ್ಮ ಸುಲಿಯವವರಿಗೆ ಮತ್ತು ಚರ್ಮ ಹದ ಮಾಡುವವರಿಗೆ ಗುರುತಿನ ಚೀಟಿ ಕೊಡಬೇಕು ಎಂಬ ಬೇಡಿಕೆಗಳು ಅದರಲ್ಲಿವೆ. ಎಂದರೆ ಪೌರ ಕಾರ್ಮಿಕ ವೃತ್ತಿಯನ್ನು, ಚರ್ಮ ಸುಲಿಯುವ ಹಾಗೂ ಹದ ಮಾಡುವ ವೃತ್ತಿಯನ್ನು ಮುಂದುವರಿಸುತ್ತೇವೆ ಎಂಬ ಒಪ್ಪಿಗೆ ಅವರ ಬೇಡಿಕೆಯಲ್ಲಿಯೇ ಹುದುಗಿದೆ. ಈ ಘಟನೆಯ ಗಾಯ ಇನ್ನೂ ಆರಿರಲಿಲ್ಲ, ಆಂಧ್ರ ಪ್ರದೇಶದಲ್ಲಿ ಹಾಗೂ ಕರ್ನಾಟಕದಲ್ಲಿ ಹಸು ಕೊಂದರೆಂದು, ಚರ್ಮ ಸುಲಿದರೆಂದು ಮೂಳೆಮುರಿದ ಸುಲಿಗೆ ಪ್ರಕರಣಗಳು ನಡೆದಿವೆ. ಸರಕಾರವು ಖಂಡಿತವಾಗಿಯೂ ಈ ಬೇಡಿಕೆಗಳನ್ನು ಈಡೇರಿಸುತ್ತದೆ. ತದ ನಂತರ ಇದೇ ದಲಿತರು ಮತ್ತದೇ ಸತ್ತ ದನಗಳನ್ನು ಎತ್ತಿ ಹಾಕುತ್ತಾರೆ, ಅವುಗಳ ಚರ್ಮ ಸುಲಿಯುತ್ತಾರೆ, ಅವುಗಳ ಮಾಂಸವನ್ನು ತಿನ್ನುತ್ತಾರೆ. ಪೌರಕಾರ್ಮಿಕರು ಶೌಚ ವೃತ್ತಿಯನ್ನು ಮುಂದುವರಿಸುತ್ತಾರೆ. ಒಂದುವಾರ ಉನಾದಲ್ಲಿ ಪ್ರತಿಭಟನೆ ನಡೆಸಿ ಅದರ ಸಮಾರೋಪದ ದಿನ ಇನ್ನೆಂದೂ ದನದ ಚರ್ಮ ಸುಲಿಯೆವು ಎಂದು ಗುಜರಾತ್‌ನ ದಲಿತರು ಪ್ರತಿಜ್ಞೆಯನ್ನೂ ಮಾಡಿದ್ದಾರೆ. ಈ ಥಳಿತ, ಪ್ರತಿಭಟನೆ, ರ್ಯಾಲಿ, ಬೇಡಿಕೆ, ಭರವಸೆಗಳೂ ಮುಂದುವರಿಯುತ್ತವೆ. ಈಗಿನದು ಚರಿತ್ರೆಯ ಹಾಗೂ ಭವಿಷ್ಯದ ಒಂದು ಝಲಕ್ ಮಾತ್ರ. ಇದೂ ಒಂದು ಬಗೆಯ ಉನಾ ಒಪ್ಪಂದ!