ನನ್ನನ್ನು ಶಿಕ್ಷಕನಾಗಿಸಿದ ಮಾದರಿ ಶಿಕ್ಷಕ ರಝಾಕ್ ಅನಂತಾಡಿ ಸರ್
‘ವಾರ್ತಾಭಾರತಿ’ಯಲ್ಲಿ ನೀವು ಗೌರವಿಸುವ ಮೇಸ್ಟ್ರನ್ನು ಸ್ಮರಿಸಿ ಗೌರವಿಸುವ ಸುವರ್ಣಾವಕಾಶವೆಂದು ನೋಡಿದ್ದೇ ತಡ, ತಕ್ಷಣ ನನ್ನ ಮನಸ್ಸು ರಝಾಕ್ ಸರ್ ಕಡೆಗೆ ತಿರುಗಿತು. ನಮ್ಮದು ಗ್ರಾಮೀಣ ಶಾಲೆ, ಸೆರ್ಕಳ,ಬಾರೆಬೆಟ್ಟು,ನಾರ್ಶ,ಬೋಳಂತೂರು,ಸುರಿಬೈಲು ಮುಂತಾದ ಹಲವಾರು ಹಳ್ಳಿ ಪ್ರದೇಶಗಳ ಏಕೈಕ ಪ್ರೌಢಶಾಲೆ. ಗೋವಿಂದೇಗೌಡ ಪ್ರಶಸ್ತಿ ಪುರಸ್ಕೃತ ಸರಕಾರಿ ಪ್ರೌಡಶಾಲೆ ನಾರ್ಶ ಮೈದಾನ.ಅದು 2006 ನೇ ಇಸವಿ. ಸರಕಾರಿ ಶಾಲೆಗಳ ಪಾರಮ್ಯದ ಅವಧಿ... ಒಂದುಕಡೆ ನಿಪುಣ,ನುರಿತ ಫಟಾನುಘಟಿ ಶಿಕ್ಷಕರು, ಇನ್ನೊಂದು ಕಡೆ ಅಷ್ಟೇ ಹಿರಿಯ SDMC ಸದಸ್ಯರ ಅವಿರತ ಶ್ರಮದ ಫಲ ನಮ್ಮ ಶಾಲೆ. ಸಮೀಪದ ಎಲ್ಲಾ ಶಾಲೆಗಳಿಗಿಂತ ಶಿಸ್ತಿನ ವಿಚಾರದಲ್ಲಿ ಒಂದು ಹೆಜ್ಜೆ ಮುಂದು. ಈ ಶಿಸ್ತಿನ ರೂವಾರಿ ರಝಾಕ್ ಸರ್. ದಿನಂಪ್ರತಿ ದೂರ ದೂರದ ವಿಧ್ಯಾರ್ಥಿಗಳು ನಡೆದುಕೊಂಡೇ ಬರುತ್ತಿದ್ದರೂ ನಾನು ಮತ್ತು ಗೆಳೆಯರು ಆಶ್ರಮದ ವಾಹನದಲ್ಲೇ ಬರುವುದು ರೂಡಿ... ಆದ್ರೂ ನಾವು ಶಾಲೆಗೆ ತಲುಪುವುದು ಲೇಟು. ವಾಹನ ತಪ್ಪಿಸಿ ಗುಡ್ಡೆಯಲ್ಲಿ ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಚಪ್ಪರಿಸುತ್ತಾ ಬರುವಾಗ ಒಂದು ದಿನ ರಝಾಕ್ ಸರ್ ಅವರಿಂದ ಚೆನ್ನಾಗಿ ಒದೆ ತಿಂದದ್ದೂ ನಂತರ ಲೇಟಾಗಿ ಬರುವ ಕಾಕಯಕ್ಕೆ ಹೆದರಿ, ಕಲಿಕೆಯಲ್ಲಿ ಉತ್ಸಾಹ ತೋರಿಸಿದ್ದು ಬದುಕಿನ ತಿರುವು.ನಿತ್ಯ 8 ಗಂಟೆಯ ಹೊತ್ತಿಗೆ ತಲುಪುವ ರಝಾಕ್ ಸರ್ ತಡವಾಗಿ ಬಂದವರನ್ನು ದಂಡಿಸುವುದು ರೂಢಿ.ವಿಧ್ಯಾರ್ಥಿಗಳ ತಪ್ಪನ್ನು ಕಂಡಾಗ ಪ್ರಥಮ ಬಾರಿಗೆ ಸಾರಿ ಹೇಳುವ ಇವರು ನಂತರ ಬೆತ್ತದ ರುಚಿ ತೋರಿಸಿ ಕೊನೆಗೆ ತಪ್ಪನ್ನು ಮನವರಿಕೆ ಮಾಡಿಕೂಟ್ಟು ನಮ್ಮನ್ನು ಸರಿದಾರಿಗೆ ತರುತ್ತಿದ್ದ ಇವರ ಅಂದಿನ ಶ್ರಮ ಇಂದು ನಮ್ಮ ಬದುಕನ್ನು ರೂಪಿಸಿದೆ. ದೂರದ ಶಾಲೆಯಿಂದ ಬಂದ ನನ್ನನ್ನು ಆ ಶಾಲೆಯಿಂದ ಬಿಡಲು ಕಾರಣವೇನೆಂದು ಕೇಳಿದಾಗ ಇಲ್ಲ ಸಲ್ಲದ ಉತ್ತರವೊಂದನ್ನು ಹೇಳಿಬಿಟ್ಟೆ,ಕೋಪಗೊಂಡ ಸರ್ ನನ್ನನ್ನು ಸ್ಟಾಫ್ ರೂಮಿಗೆ ಕರೆದು ಬುದ್ಧಿವಾದ ಹೇಳಿ ಇನ್ನೆಂದೂ ಆ ರೀತಿ ಉತ್ತರ ಕೊಡದೆ ಕಲಿಕೆಯಲ್ಲಿ ಉತ್ಸಾಹ ತೋರಿಸುವಂತೆ ನೀಡಿದ ಸಲಹೆ ಮರೆಯಲಸಾಧ್ಯ. ಮನಮುಟ್ಟುವಂತಿದ್ದ ಇವರ ಇಂಗ್ಲಿಷ್ ವ್ಯಾಕರಣ ತರಗತಿ ನನ್ನಂತೇ ಇತರ ವಿದ್ಯಾರ್ಥಿಗಳ ಭಯವನ್ನು ಇಲ್ಲವಾಗಿಸಿ ಇಂಗ್ಲೀಷ್ನಲ್ಲೇ ಹೆಚ್ಚು ಆಸಕ್ತಿ ಬರುವಂತೆ ಮಾಡಿತ್ತು. ರಝಾಕ್ ಸರ್ ಅಂದಾಗ ನಾವೆಲ್ಲಾ ಗಡಗಡ ನಡುಗುತ್ತಿದ್ದರೂ.... ಅವರ ಒಳ ಮನಸ್ಸು ಹತ್ತಿಯಂತೆ ಬಹಳ ಮೃ ದು. ಎಂತೆಂತಹ ವಿಧ್ಯಾರ್ಥಿಗಳನ್ನು ಕೂಡಾ ಕಲಿಕೆ ಮತ್ತು ಶಿಸ್ತಿನ ವಿಚಾರದಲ್ಲಿ ಸರಿದಾರಿಗೆ ತರುತ್ತಿದ್ದ ಇವರ ಚಾಕಚಕ್ಯತೆ ಅದ್ಭುತ. ಶಾಲೆ ಬಿಟ್ಟ ನಂತರವೂ ಸಂಜೆ 5 ಗಂಟೆಯ ತನಕ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಮತ್ತಿತರ ಕಲಿಕೆಗೆ ಪೂರಕವಾಗುವ ಅಂಶಗಳಲ್ಲಿ ದಿನನಿತ್ಯವೂ ತಲ್ಲೀನರಾಗುತ್ತಿದ್ದ ಇವರು, ವಿದ್ಯಾರ್ಥಿಗಳಿಗಾಗಿ ಬದುಕನ್ನೇ ಮುಡಿಪಾಗಿಟ್ಟವರು... ಶಾಲೆ ಬಿಟ್ಟು 7 ವರುಷಗಳ ಬಳಿಕ ಶಾಲೆಗೆ ಭೇಟಿ ನೀಡಿದಾಗ ಮಾತಿನ ನಡುವೆ ಅಲ್ಲಿನ ಶಿಕ್ಷಕಿಯೊಬ್ಬರು ರಝಾಕ್ ಸರ್ ಹೋದಾಗ ನಮ್ಮ ಶಾಲೆಯೂ ಹೋಯಿತು ಅಂದು ಒಂದು ಕ್ಷಣ ಭಾವುಕರಾದಾಗ ನನ್ನ ಕಣ್ಣಂಚಿನಲಿ ನೋವಿನ ನಡುವೆಯೂ ಆನಂದ ಭಾಷ್ಪ ಹರಿಯಿತು.... ರಝಾಕ್ ಸರ್ ರ ಮೇಲಿನ ಅಭಿಮಾನ ದುಪ್ಪಟ್ಟಾಯಿತು. ಶಿಸ್ತಿನ ವಿಚಾರದಲ್ಲಿ ತಲೆ ಹೋದರೂ ರಾಜಿ ಮಾಡಿಕೊಳ್ಳಬೇಡಿಎನ್ನುವ ಅವರ ಉಪದೇಶ ಯಾವತ್ತೂ ಸ್ಮರಣೀಯ. ದಾರಿ ತಪ್ಪಿದಾಗ ಹಿಡಿದು ದಂಡಿಸಿ ನನ್ನನ್ನು ಶಿಕ್ಷಕನಾಗುವಂತೆ ಪ್ರೇರೇಪಿಸಿದ ಗುರುಗಳ ಗಂಭೀರ ನಡೆ, ನುಡಿ ಎಂದಿಗೂ ಅವಿಸ್ಮರಣೀಯ.