×
Ad

ಜೀವನಕ್ಕೆ ಮಾರ್ಗದರ್ಶನರಾದ ಶಿಕ್ಷಕರು: ಶೀಲಾ ಟೀಚರ್,ಸಂತೋಷ್ ಸರ್, ಖಲೀಲ್ ಉಸ್ತಾದ್, ಜಲೀಲ್ ಸರ್…

Update: 2016-09-05 14:41 IST

ನನ್ನ ಜೀವನದಲ್ಲಿ ಹಲವಾರು ಶಿಕ್ಷಕರು ಜ್ಞಾನದ ಬೆಳಕನ್ನು ನೀಡಿ ನನ್ನನ್ನು ಅಜ್ಞಾನದಿಂದ  ಮುಕ್ತಗೊಳಿಸಿದ್ದಾರೆ. ಅವರೆಲ್ಲರಲ್ಲಿಯೂ ನನಗೆ ಸಮಾನ ಗೌರವ , ಪ್ರೀತಿ, ಭಯ ಭಕ್ತಿ ಶಾಶ್ವತ.ಆದರೆ ನನಗೆ ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ಕಲಿಸಿದ ಕೆಲವು ಶಿಕ್ಷಕರನ್ನು ನಾನೆಂದೂ ಮರೆಯಲಾರೆ . ಬಡತನದಲ್ಲೇ ಬೆಳೆದು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಆ ದಿನಗಳಲ್ಲಿ ಶಾಲಾ ಶಿಕ್ಷಕ ಪರೀಕ್ಷಾ ಶುಲ್ಕ ಕಟ್ಟಲಸಾಧ್ಯವಾದ ಸಂದರ್ಭಗಳಲ್ಲಿ ನನ್ನಂತೆ ಹಲವರಿಗೆ ಬೆನ್ನೆಲುಬಾಗಿ ನಿಂತ ನನ್ನ ಪ್ರಾಥಮಿಕ ಹಂತದ ಮೊದಲ ಅಧ್ಯಾಪಕಿ  ಶೀಲಾ ಟೀಚರ್ ಮಂಜನಾಡಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಯೊಬ್ಬ ವಿಧ್ಯಾರ್ಥಿಯ ಜೀವನದಲ್ಲಿ ಮತ್ತು ಶಿಕ್ಷಣದಲ್ಲಿ ಕೇಂದ್ರ ಬಿಂದುವಾಗಿ ಸದಾ ನೆನಪಲ್ಲಿರುವರು.

ಪ್ರೌಢಶಾಲೆಯಲ್ಲಿ ನನಗೆ ಹೆಚ್ಚು ಪ್ರಭಾವ ಬೀರಿದ ಅಧ್ಯಾಪಕರೆಂದರೆ ಶ್ರೀ ಸಂತೋಷ್ ಕುಮಾರ್ T.N (ಸಂತೋಷ್ ಸರ್)  ಅವರೊಬ್ಬ ಅಧ್ಯಾಪಕ ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಪಕ . ತನ್ನ ವೆಯಕ್ತಿಕ ,ಕೌಟುಂಬಿಕ ವಿಷಯಕ್ಕಿಂತ ಹೆಚ್ಚಾಗಿ ಶಾಲೆ ಮತ್ತು ವಿಧ್ಯಾರ್ಥಿಗಳ ಏಳಿಗೆಗಾಗಿ ಹಗಲು ರಾತ್ರಿ ಶ್ರಮಿಸುವ ಅಧ್ಯಾಪಕ . ನನ್ನ ವಿಧ್ಯಾರ್ಥಿ ಜೀವನದಲ್ಲಿ "ಗುರಿ ಮತ್ತು ಸಾಧನೆ" ಯ ಬಗ್ಗೆ ಸದಾ ಎಚ್ಚರಿಕೆ ನೀಡುತ್ತಿದ್ದ ಅಧ್ಯಾಪಕರು ಅವರೊಬ್ಬರೆ .

ತನ್ನ ಜೀವನವನ್ನು ಮಕ್ಕಳ ಏಳಿಗೆಗಾಗಿ ಮುಡಿಪಾಗಿಟ್ಟವರು.ಅವರ ಅವಿಶ್ರಾಂತ ಪರಿಶ್ರಮದ ಫಲವಾಗಿ ಸರಕಾರಿ ಪ್ರೌಢಶಾಲೆ ಮೊಂಟೆಪದವು ಕರ್ನಾಟಕದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಸರದಿಯಂತೆ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಈ ಸಂದರ್ಭಗಳಲ್ಲಿಯೂ , ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಮ್ಮಿಯೇನಲ್ಲ ಎಂದು ತೋರಿಸಿಕೊಟ್ಟು ಯಶಸ್ವಿಯಾದವರು . ಅವರ ನುಡಿಗಳು ನನ್ನ ನೆನಪಲ್ಲಿ ಹಲವು ಬಾರಿ ಮೂಡಿ ಬಂದು ಬದುಕು ಅರಳಿಸಿವೆ .

ಕಾಲೇಜು ಜೀವನದಲ್ಲಿ ನನಗೆ ಪ್ರಭಾವ ಬೀರಿದ ಅಧ್ಯಾಪಕರೆಂದರೆ ಖಲೀಲು ರಹ್ಮಾನ್ (ಕಲೀಲ್ ಉಸ್ತಾದ್) ಇವರು ಅರೆಬಿಕ್ ವಿಭಾಗದ ಪ್ರೊಫೆಸರ್ ಆಗಿದ್ದರುಇವರ ಪಾಠ ಕ್ಕಿಂತ ಹೆಚ್ಚಾಗಿ ಇವರ ಒಡನಾಟ ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದೆ ಸರಳತೆಗೆ ಇನ್ನೊಂದು ಉದಾಹರಣೆ, ಜವಾಬ್ದಾರಿ ನಿಭಾಯಿಸುವಲ್ಲಿ ಅವರಲ್ಲಿ ನಾವು ಕಲಿಯಲು ಬಹಳ ಇದೆ.

ಮತ್ತೋರ್ವರು ಅಬ್ದುಲ್ ಜಲೀಲ್  (ಜಲೀಲ್ ಸರ್) ಇಂಗ್ಲಿಷ್ ಅಧ್ಯಾಪಕರಾಗಿದ್ದರು. ನಾನು ಇಂಗ್ಲಿಷ್ ಅಂದರೆ ಏನು ಅಂತ ಕಲಿತದ್ದು ಅವರಿಂದ.ತಾಳ್ಮೆ, ಸಜ್ಜನಿಕೆ ಸ್ವಭಾವದವರು. ಅವರ ಬೋಧನೆಯು ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಬದಲಾವಣೆಯನ್ನು ತರುತ್ತದೆ.ಆಲಿಯಾ ಇಂಟರ್ ನ್ಯಾಷನಲ್ ಅಕಾಡಮಿಯಲ್ಲಿ ಅವರ ವಿದ್ಯೆಯ ಅಮೂಲ್ಯ ಬಿಂದುಗಳನ್ನು ಪಡೆಯುವ ಭಾಗ್ಯ ನನಗೆ ಲಬಿಸಿದ್ದು ದೇವಾನುಗ್ರಹ ಅವರು ಹೊಡೆಯದಿದ್ದರೂ ಒಂದು ರೀತಿಯ ಭಯ,ಪ್ರೀತಿ ನಮಗೆ ಅವರ ಮೇಲೆ ಮೂಡಿ ಬರುತ್ತಿದ್ದವು. ಅವರ ಜೀವನ ರೀತಿಯೆ ನಾನು ಕಲಿತ ದೊಡ್ಡ ಪಾಠ. ಈ ನಾಲ್ಕು ಶಿಕ್ಷಕರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಗೊಂಡಿದ್ದಾರೆ. ಅವರ ನುಡಿ ಮತ್ತು ಬದುಕಿನ ಪಾಠ ನನ್ನ ಜೀವನ ಮಾರ್ಗದರ್ಶನವಾಗಿದೆ.

Writer - ಅಶೀರುದ್ದೀನ್ ಮಂಜನಾಡಿ

contributor

Editor - ಅಶೀರುದ್ದೀನ್ ಮಂಜನಾಡಿ

contributor

Similar News