×
Ad

ಮಾತೃ ಹೃದಯಿ ದುರ್ಗಪ್ಪ ಗುರುವಿಗೆ ನನ್ನದೊಂದು ಸಲಾಂ

Update: 2016-09-05 14:57 IST

ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರೇ ಗುರು. ಅಂತಹ ಗುರುವೃಂದವನ್ನು ನೆನೆಯುವ ಸುದಿನ ಇಂದು. ಕಲ್ಲನ್ನು ಸುಂದರ ಮೂರ್ತಿ ಮಾಡುವ ಶಿಲ್ಪಿ, ಕಲೆಗಾರ ಗುರುವಾಗಿದ್ದಾರೆೆ. ಪ್ರಾಥಮಿಕ ಶಾಲೆಯಲ್ಲಿ ನಾವು ಮಾಡಿದ ತುಂಟಾಟಕ್ಕೆ ಬ್ರೇಕ್ ಹಾಕಿ, ಗುರುಗಳು ತೋರಿದ ದಾರಿಯಲ್ಲಿ ಮುನ್ನಡೆದು, ಇಂದು ಸ್ವಾವಲಂಬಿ ಬದುಕಿನಲ್ಲಿ ಇದ್ದೇವೆ ಎಂದರೆ ಅದು ಗುರು ತೋರಿದ ದಾರಿ. ಶೈಕ್ಷಣಿಕ ಆರಂಭಿಕ ಹಂತದಲ್ಲಿ ಅಜ್ಞಾನದ ಮೂಟೆಗಳಾಗಿದ್ದ ವಿದ್ಯಾರ್ಥಿ ವೃಂದವನ್ನು ಗುರು ವೃಂದ ಜ್ಞಾನದ ಮೂಟೆಗಳಾಗಿ ಪರಿವರ್ತಿಸಿ ವ್ಯಕ್ತಿತ್ವಕ್ಕೊಂದು ರೂಪು ಕೊಡುವ ಗುರು ತನ್ನ ಶಿಷ್ಯ ಬಳಗವನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವುದರ ಜೊತೆಗೆ ಬದುಕಿಸುವ ಕಲೆಯ ಪಾಠ ಕಲಿಸುತ್ತಾನೆ. ಜ್ಞಾನದ ಜೊತೆಗೆ ಜೀವನದ ಪಾಠ ಗುರುವಿನದ್ದಾಗಿರುತ್ತದೆ. ಇಂತಹ ಗುರು ಕುಲಕ್ಕೆ ಅನಂತ ಕೃತಜ್ಞತೆಗಳು.

 ನಾನು ಪ್ರಾಥಮಿಕ ಶಾಲೆಗೆ ತಪ್ಪದೇ ಹೋಗುತ್ತಿದ್ದ ದಿನಗಳವು. ಅಲ್ಲಿ ನಮ್ಮದೆ ಮಾತು ನಡೆಯುತ್ತಿತ್ತ್ತು. ಪಾಠ ಮುಗಿಯುತ್ತಿದ್ದಂತೆ ಮಧ್ಯಾಹ್ನ ಹೊಟ್ಟೆ ಹಸಿದಿರುತ್ತಿತ್ತು. ಗುರುಗಳಿಗೆ ಊಟ ಬಡಿಸಿ ಅವರೊಂದಿಗೆ ದೂರದಲ್ಲಿ ಕುಳಿತು ಗುರುಗಳ ಮಾತುಗಳೊಂದಿಗೆ ಭೋಜನ ಸವಿದರೆ ಅಮೃತಕ್ಕೆ ಸಮ. ನಾವೆಲ್ಲ ಅವರಿಗೆ ಅಚ್ಚುಮೆಚ್ಚಿನ ಶಿಷ್ಯರಾಗಿದ್ದೆವು. ನಾನು ಮಂಜುಳಾ ಆತ್ಮೀಯ ಗೆಳತಿಯರು. ಎಲ್ಲಿಗೆ ಹೋದರೂ ಇಬ್ಬರು ಕೂಡಿಯೇ ಹೋಗೋರು. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುತ್ತಿರಲಿಲ್ಲ. ನಮ್ಮಿಬ್ಬರಿಗೂ ಇಂಗ್ಲಿಷ್ ಕ್ಲಾಸ್ ಅಂದ್ರೆ ಕಬ್ಬಿಣದ ಕಡಲೆ. ಒಂದು ದಿನವೂ ಇಂಗ್ಲಿಷ್ ಕ್ಲಾಸಿಗೆ ಹಾಜರಾದ ದಿನಗಳೇ ಇಲ್ಲ. ಪ್ರತಿ ದಿನವೂ ಏನಾದರು ಒಂದು ನೆಪ ಹೇಳಿ, ಆ ಕ್ಲಾಸ್ ತಪ್ಪಿಸಿಕೊಳ್ಳುತ್ತಿದ್ದೆವು. ನಾವಿಬ್ಬರು ಮೊದಲ ಸಾಲಿನಲ್ಲಿಯೇ ಕುಳಿತುಕೊಳ್ಳುತ್ತಿದ್ದೆವು. ಇಂಗ್ಲಿಷ್ ಕ್ಲಾಸ್ ಬಂದ್ರೆ ಮಾತ್ರ ಕ್ಲಾಸಿನಲ್ಲಿರುತ್ತಿರಲಿಲ್ಲ. ಆದರೆ ಹೊಸದಾಗಿ ಇಂಗ್ಲಿಷ್ ಮಾಸ್ತರ್ ಬಂದರು. ಅವರೇ ದುರ್ಗಪ್ಪ. ಅಲ್ಲಿಂದ ನಮ್ಮ ತುಂಟಾಟ ನಿಂತಿತ್ತು. ಇಂಗ್ಲಿಷ್ ವಿಷಯ ನುಂಗಲಾರದ ಬಿಸಿತುಪ್ಪದಂತಾಗಿತ್ತು. ಅದಕ್ಕೆ ನಾವು ಹೊರಗೆ ಇರುತ್ತಿದ್ದೇವು. ಅದನ್ನು ಕಂಡ ನಮ್ಮ ಆ ಫಾರಿನ್ ಭಾಷೆಯ ಮಾಸ್ತರರು ನಮ್ಮನ್ನು ಇಡೀ ದಿನ ಒಂದೇ ಕಾಲಿನಲ್ಲಿ ನಿಲ್ಲಿಸಿದ್ದರು.

ಅಲ್ಲಿಯವರೆಗೂ ನಾವೇ ರಾಣಿಯರು ಅಂತ ಮೆರೆದಿದ್ದ ನಮಗೆ ಅವತ್ತು ಮಾತ್ರ ಒಂಟಿಕಾಲಿನಲ್ಲಿ ನಿಲ್ಲಿಸಿದ್ದು ಅವಮಾನವಾಗಿತ್ತು. ಅದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದೆವು. ಅದಕ್ಕೆ ಒಂದು ದಿನ ಅವರ ಊಟದಲ್ಲಿ ಉಪ್ಪನ್ನು ಹಾಕಿ ಪ್ರತೀಕಾರವನ್ನು ತೀರಿಸಿಕೊಂಡಿದ್ದೆವು. ಈ ಕೆಲಸ ನಮ್ಮದೇ ಎಂದು ಗೊತ್ತಾಗಿ ಆ ಇಂಗ್ಲಿಷ್ ಮಾಸ್ತರರು ಎಲ್ಲ ಗುರುಗಳ ಮುಂದೆ ಬೈಯುತ್ತಾರೆ ಎಂದುಕೊಂಡಿದ್ದೆವು. ಆದರೆ ಆ ಮಾತೃ ಹೃದಯಿ ಗುರು ಮರುದಿನ ನಮ್ಮನ್ನ ಕರೆದು ಬುದ್ಧಿಮಾತು ಹೇಳಿದರು. ಅಷ್ಟೇ ಅಲ್ಲದೆ, ಇಂಗ್ಲಿಷ್ ಅಂದ್ರೆ ಕಷ್ಟವೇನು ಅಲ್ಲ, ನೀವು ಮನಸ್ಸು ಮಾಡಿದರೆ ಏನನ್ನಾದರೂ ಕಲಿಯಬಹುದು ಎಂದರು.

ಅಂದಿನಿಂದ ನಾವಿಬ್ಬರೂ ಪ್ರತಿದಿನವೂ ಇಂಗ್ಲಿಷ್ ಕ್ಲಾಸನ್ನು ಮಿಸ್ ಮಾಡದೇ ಹೋಗುತ್ತಿದ್ದೆವು. ಒಂದು ವರ್ಷದಲ್ಲಿ ಇಂಗ್ಲಿಷ್ ವಿಷಯದಲ್ಲಿ ಹೆಚ್ಚು ಅಂಕ ಪಡೆದವರು ನಾವೇ. ಆದರೆ ನಮ್ಮ ದುರದೃಷ್ಟಕ್ಕೆ ವಿಷಯ ಹೇಳಲು ಆ ಗುರುಗಳು ಬೇರೆ ಕಡೆ ವರ್ಗಾವಣೆಯಾಗಿದ್ದರು. ಗುರುಗಳು ಹೇಳಿದ ಮಾತಿನಿಂದಾಗಿ ಇಂದು ಇಂಗ್ಲಿಷ್ ಎನ್ನುವುದು ಸರಳ ಭಾಷೆಯಾಗಿದೆ. ಇದಕ್ಕೆ ಕಾರಣರಾದ ಆ ಇಂಗ್ಲಿಷ್ ಗುರುಗಳಿಗೆ ನನ್ನದೊಂದು ನಮನ. ನಾನು ಅಂದು ಮಾಡಿದ ತಪ್ಪಿಗೆ ಇಂದು ಕ್ಷಮೆ ಕೇಳಬೇಕೆಂದರೂ ಆ ಗುರುಗಳು ಇಂದು ಎಲ್ಲಿದ್ದಾರೋ, ಹೇಗಿದ್ದಾರೋ ಗೊತ್ತಿಲ್ಲ. ಎಲ್ಲೆ ಇದ್ದರೂ ನಿಮಗೆ ದೇವರು ಆಯುಷ್ಯ, ಆರೋಗ್ಯ ನೀಡಲಿ. ಎಲ್ಲಾ ಗುರುವೃಂದಕ್ಕೆ ನನ್ನ ಅನಂತಪೂರ್ವಕ ನಮನ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು

Writer - ಸುಧಾ ಪಿ. ಪಾಟೀಲ, ಕುಷ್ಟಗಿ

contributor

Editor - ಸುಧಾ ಪಿ. ಪಾಟೀಲ, ಕುಷ್ಟಗಿ

contributor

Similar News