ನನ್ನ ಪ್ರತಿಭೆ ಗುರುತಿಸಿದ ಗ್ರೇಟ್ ಶಿಕ್ಷಕ ಸರ್ವೇಶ್
ಪ್ರಾಥಮಿಕ, ಪ್ರೌಢ, ಪಿಯುಸಿ ಶಿಕ್ಷಣದ ಸಂದರ್ಭದಲ್ಲಿ ಯಾವುದೇ ಶಿಕ್ಷಕರು ನನ್ನ ಮೇಲೆ ಅಷ್ಟೊಂದು ಪ್ರಭಾವ ಬೀರಿರಲಿಲ್ಲ. ಆದರೆ ನಾನು ಪದವಿ ಶಿಕ್ಷಣಕ್ಕಾಗಿ ಬ್ರಹ್ಮಾವರದ ಡಾ.ಎ.ವಿ.ಬಾಳಿಗಾ ಕಾಲೇಜಿಗೆ ಸೇರಿದ ನಂತರ ನನ್ನ ಜೀವನದ ದಿಕ್ಕು ಬದಲಾಯಿತು. ಇದಕ್ಕೆಲ್ಲ ಆ ಕಾಲೇಜಿನ ಗ್ರಾಮೀಣಾಭಿವೃದ್ಧಿ ಉಪನ್ಯಾಸಕರಾಗಿದ್ದ ಸರ್ವೇಶ್ ಅವರೇ ಕಾರಣೀಭೂತರು.
ನಾನು ಪದವಿ ಶಿಕ್ಷಣಕ್ಕೆ ಕಾಲಿಡುವವರೆಗೆ ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ನನ್ನಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಹುರಿದುಂಬಿಸಿದ್ದು ಇದೇ ಅಧ್ಯಾಪಕರು. ನನ್ನ ಬದುಕಿಗೆ ಯೂ ಟರ್ನ್ ನೀಡಿದ ನನ್ನ ಗ್ರೇಟ್ ಶಿಕ್ಷಕ. ನಂತರ ನಾನು ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದೆ. ಭಾಷಣ ಸೇರಿದಂತೆ ಹಲವು ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಲು ತುಂಬಾ ಪ್ರೋತ್ಸಾಹ ನೀಡಿದರು.
ಪಠ್ಯೇತರ ಚಟುವಟಿಕೆಗಳು ನನ್ನ ವಿಕಸನಕ್ಕೆ ಬಹಳಷ್ಟು ಸಹಕಾರಿಯಾಗಿವೆ. ನನ್ನಲ್ಲಿ ಈ ರೀತಿಯ ಕೌಶಲ್ಯಗಳು ಇತ್ತು ಎಂದು ನನಗೇ ಅರಿವಿರಲಿಲ್ಲ. ಅದನ್ನು ಗುರುತಿಸಿ ನನ್ನ ಬದುಕಿಗೆ ಸರಿಯಾದ ಮಾರ್ಗ ತೋರಿದ ಆ ಶಿಕ್ಷಕರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಇಂದಿಗೂ ನನ್ನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.