×
Ad

ಸ್ವಂತ ಮಗನಂತೆ ನನ್ನನ್ನು ತಿದ್ದಿದ 'ಏಂಜಲೀನಾ ಟೀಚರ್'

Update: 2016-09-05 16:31 IST

'ವಾರ್ತಾಭಾರತಿ' ನಿಮ್ಮ ಮೆಚ್ಚಿನ ಶಿಕ್ಷಕರ ಬಗ್ಗೆ ಬರೆಯಿರಿ ಎಂದಾಗ ನಾನು ಸ್ವಲ್ಪ ವಿಚಲಿತನಾದೆ. ಏಕೆಂದರೆ, ಇಂದು ನಾನು ಈ ಮಟ್ಟಕ್ಕೆ ಬಂದು ಇಲ್ಲಿ ಬರೆಯಲು ಕಾರಣವೆಂದರೆ ನನ್ನೆಲ್ಲಾ ಗುರುವೃಂದ. ಆದರೂ ಅವರಲ್ಲಿ ಮೆಚ್ಚಿನ ಶಿಕ್ಷಕರು ಯಾರು ಅಂತ ತಲೆಯಲ್ಲಿ ಹುಳ ಬಿಟ್ಟಾಗ ಮೊದಲು ಬಂದ ಹೆಸರು ಏಳನೇ ತರಗತಿಯ ಶಿಕ್ಷಕಿ ಏಂಜಲೀನಾ ಟೀಚರ್. ಏಂಜಲೀನ್ ಅಂದರೆ ದೇವಲೋಕದ ಅಪ್ಸರೆ ಎಂದರ್ಥ. ಹೌದು, ಆಕೆ ನನ್ನ ಜ್ಞಾನದ ದಾಹವನ್ನು ತೀರಿಸಿದ ಅಪ್ಸರೆ. ಸೂತ್ರ ಹರಿದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದೆ ಅಡ್ಡಾ ದಿಡ್ಡಿಯಾಗಿ ಚಲಿಸುತ್ತಿದ್ದ ನನ್ನ ಜೀವನದ ದಿಕ್ಕನ್ನೇ ಬದಲಿಸಿ, ನನಗೆ ಜ್ಞಾನವನ್ನು ಧಾರೆ ಎರೆದ ಅಪ್ಸರೆಯ ಬಗ್ಗೆ  ನಾನು ಹೇಳಲೇಬೇಕು. ಈ ಲೇಖನವನ್ನು ಓದಿ ನಿಮ್ಮ ಜ್ಞಾನದ ಅಪ್ಸರೆಯ ಬಗ್ಗೆ ನಿಮಗೆ  ನೆನಪಾದರೆ ನಾನು ಬರೆದಿದ್ದಕ್ಕೆ ಧನ್ಯ.

         ನಾನು ಓದಿದ್ದು ಸರ್ಕಾರಿ ಶಾಲೆಯಲ್ಲಿ, ಸರ್ಕಾರಿ ಶಾಲೆ ಎಂದ ಮೇಲೆ ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕೆಂದಿಲ್ಲ. ಕನ್ನಡ ಮಾಧ್ಯಮದೊಂದಿಗೆ ಮೌಲ್ಯಯುತ ಶಿಕ್ಷಣಕ್ಕೆ ನಮ್ಮ ಶಿಕ್ಷಕರ ಆಧ್ಯತೆ. ಅವಾಗ ಹೆಚ್ಚು ಕಮ್ಮಿ 2006 ನೇ ಇಸವಿಯ ಸಮಯ. ಐದನೇ ತರಗತಿಯಿಂದ ಆಂಗ್ಲ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಲಿಯಬೇಕಿತ್ತು. ಬೇರೆಲ್ಲಾ ವಿಷಯಗಳಲ್ಲೂ ಸದಾ ಮುಂದಿದ್ದ ನಾನು  ಏಳನೇ ತರಗತಿಗೆ ಬಂದರೂ ಆಂಗ್ಲ ಭಾಷೆ ಮಾತ್ರ ಕಬ್ಬಿಣದ ಕಡಲೆಯಾಗಿಯೇ ಉಳಿದಿತ್ತು. ಕಲಿಕೆಯಲ್ಲೂ ಆಸಕ್ತಿ ಕಡಿಮೆಯಾಗುತ್ತಾ ಬಂದಿತ್ತು. ಇನ್ನೇನು ಕಲಿಕೆಗೆ ಎಳ್ಳು ನೀರು ಬಿಡುವ ಸಿದ್ಧತೆಯಲ್ಲಿದ್ದ ನನ್ನನ್ನು,  ನನ್ನ ಸಾಮರ್ಥ್ಯವನ್ನು ಗಮನಿಸಿದ ನನ್ನ ಟೀಚರ್  ಸ್ವಂತ ಮಗನಂತೆ ಕರೆದು ಬುದ್ದಿ ವಾದ ಹೇಳಿದಾಗ ನನಗೆ ಅದನ್ನು ಸ್ವೀಕರಿಸದೆ ಬೇರೆ ದಾರಿ ಇರಲಿಲ್ಲ. 

         ಪ್ರತಿ ದಿನ ಉಕ್ತಲೇಖನ ಕೊಡುತ್ತಾ ಬಹುಮಾನ ಕೊಡುವ ಆಮಿಷ ಬೇರೆ ಒಡ್ಡುತ್ತಿದ್ದರು. ಆದರೆ ಬಹುಮಾನ ಪಡೆಯಬೇಕೆಂದರೆ ಆ ವರ್ಷದಲ್ಲಿ ನೀಡುವ ಪ್ರತಿ ಉಕ್ತ ಲೇಖನ ಪರೀಕ್ಷೆಯಲ್ಲೂ ಯಾವುದೇ ತಪ್ಪಿಲ್ಲದೆ ಸರಿಯುತ್ತರ ಬರೆಯಬೇಕಿತ್ತು. ಒಂದೇ ಒಂದು ತಪ್ಪು ಅಂಕ ಬಂದರೂ ಬಹುಮಾನ ಕಳೆದುಕೊಳ್ಳುತ್ತೀರಿ ಎಂಬುದಾಗಿತ್ತು ವಿಧಿಸಿದ ಷರತ್ತು. ಪ್ರತಿ ದಿನ ಮೊದಲನೇ ಅವಧಿ ಆಂಗ್ಲ ಭಾಷೆಯಾಗಿತ್ತು. ಅವರು ಪಾಠ ಮಾಡುವ ಶೈಲಿ, ವಿವರಣಾ ಕೌಶಲ, ಇನಾಮು ಪಡೆಯಲೇಬೇಕೆಂಬ ಛಲ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಕಬ್ಬಿಣದ ಕಡಲೆಯಾಗಿದ್ದ ಆಂಗ್ಲ ಭಾಷೆ ಸುಲಿದ ಬಾಳೆ ಹಣ್ಣಿನಂತಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ವರ್ಷದ ಕೊನೆಯಲ್ಲಿ ಬಹುಮಾನವು ನನ್ನ ಪಾಲಾಯಿತು. ಅದನ್ನು ಪಡಕೊಂಡಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಖುಷಿಪಟ್ಟವರು ನನ್ನ ಟೀಚರ್. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಟೀಚರ್ ತೋರಿಸುತ್ತಿದ್ದ ಪ್ರೀತಿಯನ್ನು ನೆನಪಿಸಿಕೊಂಡಾಗ ಇಂದಿಗೂ ನನ್ನ ಕಣ್ಣಲ್ಲಿ ಹನಿಗಳು ಬರುವಂತೆ ಮಾಡುತ್ತದೆ.

         ಆ ಪ್ರೇರಣೆ ಮುಂದೆ  ನಾನು ಚೆನ್ನಾಗಿ ಕಲಿತು ಶಿಕ್ಷಕನಾಗುವಂತೆ ಮಾಡಿತು. ಇಂದು ನಾನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಇತ್ತೀಚೆಗೆ ಒಮ್ಮೆ ಅವರನ್ನು ಭೇಟಿ ಮಾಡಿದಾಗ ಇದನ್ನೆಲ್ಲಾ ಹೇಳಬೇಕೆಂದಿದ್ದೆ. ಆದರೆ ಅವರಲ್ಲಿ ಮಾತನಾಡಿದಾಗ ಅರ್ಥವಾಯಿತು, ಅವರು ನೀರೆರೆದು ಬೆಳೆಸಿದ ಬೃಹತ್ ವೃಕ್ಷದಲ್ಲಿ ನಾನು ಕೇವಲ ಎಲೆ ಮಾತ್ರವೆಂದು. ನನ್ನಂತೆಯೇ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿ ಕೊಟ್ಟ ಸಾರ್ಥಕತೆ ಅವರ ಮುಖದಲ್ಲಿತ್ತು. ಟೀಚರ್, ನೀವು ಎಲ್ಲೇ ಇರಿ, ಹೇಗೆ ಇರಿ, ಸುಖವಾಗಿರಿ ಎಂಬುದೇ ನನ್ನ ಹಾರೈಕೆ.

         ಕೊನೆಯದಾಗಿ ಒಂದು ಮಾತು, ಜಗತ್ತಿನಲ್ಲಿ ವಿಜ್ಞಾನಿಗಳು ಸಿಕ್ಕಿದ್ದನ್ನೆಲ್ಲಾ ಸಂಶೋಧಿಸಿ ಎಲ್ಲವನ್ನೂ ಕಂಡುಹಿಡಿದಿದ್ದಾರೆ. ಆದರೆ ಶಿಕ್ಷಕರಿಗೆ ಪರ್ಯಾಯವಾಗಿ ಒಂದು ಯಂತ್ರವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ, ಇನ್ನು ಸಾಧ್ಯವೂ ಇಲ್ಲ.

ನನ್ನೆಲ್ಲಾ ಗುರುಹಿರಿಯರಿಗೂ, ಸ್ನೇಹಿತರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Writer - ಮನಾಝಿರ್ ಎಂ.ಎ ಮುಡಿಪು

contributor

Editor - ಮನಾಝಿರ್ ಎಂ.ಎ ಮುಡಿಪು

contributor

Similar News