×
Ad

ನಾನು ಮರೆಯಲಾರದ ಶಿಕ್ಷಕರು : ಆನಂದ ಹಿಂಗಾಣಿ ಹಾಗೂ ಚಂದ್ರಶೇಖರ್

Update: 2016-09-05 17:16 IST

ನನ್ನ ನೆಚ್ಚಿನ ಮೇಷ್ಟ್ರ ಬಗ್ಗೆ ಯೋಚಿಸಿದಾಗಲೆಲ್ಲ ನಾನು ರೋಮಾಂಚನಗೊಳ್ಳುತ್ತೇನೆ ಭಾವುಕನಾಗುತ್ತೇನೆ ಇದು ಕೇವಲ ಶಬ್ದಗಳ ವರ್ಣನೆಯಲ್ಲ. ಮನದಾಳದ ಮಾತುಗಳು ಯಾಕೆಂದರೆ ನನ್ನ ಬದುಕಿನಲ್ಲಿ ಹೊಸ ಅಧ್ಯಾಯದ ಪುಟಗಳನ್ನು ತೆರೆದ ನನ್ನ ಮೇಷ್ಟ್ರು ನನ್ನ ಜನ್ಮದಾತರಿಗೆ ಸಮಾನರು ಎಂದು ಭಾವಿಸುತ್ತೇನೆ.

         ನನ್ನ ಬದುಕಿನ ಅಧ್ಯಾಯದಲ್ಲಿ ಹೊಸ ಪುಟ ತೆರೆದ ನನ್ನ ಮೇಷ್ಟ್ರ ವ್ಯಕ್ತಿತ್ವವೇ ನನಗೆ ಮಾದರಿ. ಅವರ ಎತ್ತರದ ನಿಲುವು, ದಪ್ಪಸ್ವರ ಇಂದಿಗೂ ನನ್ನ ಕಣ್ಣ ಮುಂದಿದೆ. ನನ್ನನ್ನು ಗದರಿಸಿದ ನಂತರ ಪ್ರೀತಿಯಿಂದ ಮಾತನಾಡಿದ ಆ ಮೇಷ್ಟ್ರು ನನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿದರು ಎಂಬುದು ಈಗ ಈ ಸ್ಥಾನದಲ್ಲಿ ನಿಂತುಕೊಂಡಾಗ ಅರ್ಥವಾಗತೊಡಗಿದೆ. ಅಂತಹ ಮಾದರಿ ಮೇಷ್ಟ್ರ ಹೆಸರನ್ನು ನಾನು ನಿಮಗೆ ಹೇಳಲೇಬೇಕು.

        ಗ್ರಾಮೀಣ ಪ್ರದೇಶದ ಸೌಲಭ್ಯ ವಂಚಿತ ಭಾಗದಿಂದ ಬಂದವರು ನನ್ನ ತಂದೆ ತಾಯಿಯರು. ಅಂತಹ ಸಂದರ್ಭದಲ್ಲಿ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.ನಾನು 1ನೇ ತರಗತಿಗೆ ಪ್ರವೇಶ ಗಿಟ್ಟಿಸಿದೆ.

        ನನ್ನ ತಂದೆಯನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯೇ ಅಲ್ಲಿಯ ಶಿಕ್ಷಕರಾಗಿದ್ದುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ಅಂತಹ ಭಾಗ್ಯ ನನ್ನ ಪಾಲಿಗೆ ಲಭಿಸಿದ್ದು ದಿ.ಆನಂದ ಹಿಂಗಾಣಿ ಎಂಬ ಶಿಕ್ಷಕರಿಂದ ನನ್ನನ್ನು ಗದರಿಸಿ, ತಿದ್ದಿ, ಬುದ್ಧಿ ಹೇಳಿ, ದಾರಿ ತೋರಿಸಿದ ಮುಖ್ಯೋಪಾಧ್ಯಾಯ ಚಂದ್ರಶೇಖರ್‌ಗೆ ನನ್ನ ಕೃತಜ್ಞತೆಯನ್ನು ಹೇಗೆ ಸಮರ್ಪಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ.

         ದಪ್ಪ ಸ್ವರದಲ್ಲಿ ಗದರಿಸುತ್ತಿದ್ದ ಚಂದ್ರಶೇಖರ್ ನನ್ನನ್ನು ಕಂಡು ಅಷ್ಟೇ ಆತ್ಮೀಯತೆಯಿಂದ ಮಾತನಾಡುತ್ತಿದ್ದರು. ಶಬೀರ್‌ನಿನ್ನನ್ನು ನಿನ್ನ ತಂದೆ ಬಹಳ ಕಷ್ಟದಿಂದ ಶಾಲೆಗೆ ಕಳುಹಿಸುತ್ತಿದ್ದಾರೆ. ನೀನು ಬುದ್ಧಿವಂತ ವಿದ್ಯಾರ್ಥಿಯಾಗಬೇಕು ಎಂಬ ಅವರ ಪ್ರೀತಿಯ ಮಾತುಗಳನ್ನು ನಾನು ಎಂದಿಗೂ ಮರೆಯಲಾರೆ.

          ಹೈಸ್ಕೂಲಿನಲ್ಲಿ ಓದುವುದರಲ್ಲಿ ಮುಂದೆ ಇದ್ದ ನನ್ನನ್ನು ಯಾವಾಗಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ನನ್ನ ಮೇಷ್ಟ್ರು, ನನ್ನ ತಂದೆಯಲ್ಲಿ ಬಂದು ನನ್ನ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೇಳಿ ನನ್ನ ಬೆನ್ನು ತಟ್ಟಿದರು. ಸಿದ್ಧಕಟ್ಟೆಯ ಮುಖ್ಯ ಸ್ಥಳದಲ್ಲಿರುವ ನಮ್ಮ ತಂದೆಯ ಅಂಗಡಿಗೆ ಬರುತ್ತಿದ್ದು ನನ್ನ ಮೇಷ್ಟ್ರು ನನ್ನ ತಂದೆಯ ಬಳಿ ನನ್ನ ಶೈಕ್ಷಣಿಕ ಪ್ರಗತಿಯ ಬಗ್ಗೆ ಅತೀವ ಆಸಕ್ತಿಯಿಂದ ಚರ್ಚಿಸುತ್ತಿದ್ದರು. ಅಂಗಡಿಯಲ್ಲಿ ಕುಳಿತುಕೊಂಡು ನನ್ನ ತಂದೆಯಲ್ಲಿ ಚರ್ಚಿಸುತ್ತಿದ್ದ ಇಂತಹ ಮಾದರಿ ಮೇಷ್ಟ್ರುನ್ನು ಈಗಿನ ಸಂದರ್ಭದಲ್ಲಿ ನಾವು ಕಾಣಬಹುದೇ? ಅಂತಹ ಮೇಷ್ಟ್ರುಗಳು ಕಾಣಸಿಕ್ಕರೆ ಅಂದಿಗೆ ಸಮಾಜ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯಬಹುದು. ಯಾಕೆಂದರೆ ಒಂದು ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ವೈಯಕ್ತಿಕ ಆಸಕ್ತಿಯನ್ನು ಓರ್ವ ಅಧ್ಯಾಪಕ ತೆಗೆದುಕೊಂಡಾಗಲೇ ಭಾರತದ ಭವಿಷ್ಯ ಬದಲಾಗಬಹುದು ಎಂಬ ಅನಿಸಿಕೆ ನನ್ನದ್ದು. ನೂರಾರು ಮಕ್ಕಳು ಇರುವ ಸಂದರ್ಭದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ ಏಳಬಹುದು. ಈ ಪ್ರಶ್ನೆ ಸಹಜವೇ ಆದರೆ ನಮ್ಮಲ್ಲಿ ಇಚ್ಛಾ ಶಕ್ತಿ ಇದ್ದರೆ ಇದು ಸಾಧ್ಯ ಎಂಬುದು ನನ್ನ ಬಲವಾದ ನಂಬಿಕೆ.

         ಶಿಸ್ತು, ಸಮಯಪಾಲನೆ, ಹಿಡಿದ ಕೆಲಸವನ್ನು ಬಿಡದೆ ಮಾಡುವ ಪ್ರವೃತ್ತಿಯಂತಹ ಅಪಾರ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಆದರೆ ನನ್ನನ್ನು ಬಹುವಾಗಿ ಕಾಡಿದ ಹಾಗೂ ನನ್ನ ಮೇಲೆ ಬಹು ಪ್ರಭಾವ ಬೀರಿದ ಅಂಶ ಅವರ ಸಮಾಜ ಸೇವೆ. ಅವರ ಸಮಾಜ ಸೇವೆಯ ಅಂಶ ನನ್ನ ಮೇಲೂ ಪ್ರಭಾವ ಬೀರಿದ ಪರಿಣಾಮ ನಾನು ರಾಜಕೀಯ ಕ್ಷೇತ್ರದ ಭಾಗವಾಗಿ ಹೋಗಲು ಸಾಧ್ಯವಾಗಿದೆ ಎಂದು ಅನಿಸುತ್ತದೆ.

ಈ ಮಾದರಿ ಮೇಷ್ಟ್ರು ಅಲ್ಲದೇ, ನನ್ನ ಜೀವನದಲ್ಲಿ ತಿರುವು ನೀಡಿದ ಇನ್ನೊಂದು ಮೇಷ್ಟ್ರನ್ನು ನೆನಪಿಸ ಬಯಸುತ್ತೇನೆ. ಅವರ ಹೆಸರು ಆನಂದ ಹಿಂಗಾಣಿ ಮೇಷ್ಟ್ರು. ಸರಿಸುಮಾರು 13 ವರ್ಷಗಳ ಹಿಂದೆ ಮಾನ್ಯ ಸಚಿವರಾದ ರಮಾನಾಥ ರೈ ಯವರಿಗೆ ಪರಿಚಯಿಸಿ ನನ್ನ ಜೀವನದಲ್ಲಿ ಹೊಸ  ಅಧ್ಯಾಯದ ಪುಟ ತೆರೆದರು. ಅಂದು ನನ್ನನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋದ ಸಂದರ್ಭವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಆದರೆ ನನ್ನ ನೆಚ್ಚಿನ ಮೇಷ್ಟ್ರು ಇಂದು ನಮ್ಮೊಂದಿಗಿಲ್ಲ ಎಂಬುದು ನನಗೆ ದು:ಖ ತಂದರೂ, ನನ್ನ ಮೇಷ್ಟ್ರುಗೆ ನನ್ನ ಜೀವನದ ಪುಟದಲ್ಲಿ ಪ್ರತ್ಯೇಕ ಸ್ಥಾನವನ್ನು ನೀಡಿದ್ದೇನೆ.

Writer - ಶಬೀರ್ ಸಿದ್ಧಕಟ್ಟೆ

contributor

Editor - ಶಬೀರ್ ಸಿದ್ಧಕಟ್ಟೆ

contributor

Similar News