ಬಿಜೆಪಿಯ ಹಿರಿಯ ನಾಯಕ ಆರೀಫ್ ಬೇಗ್ ನಿಧನ
ಹೊಸದಿಲ್ಲಿ, ಸೆ.5: ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆರೀಫ್ ಬೇಗ್ ಹೃದಯಾಘಾತದಿಂದ ಭೂಪಾಲ್ ನಲ್ಲಿ ಇಂದು ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ಎರಡು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಆರೀಫ್ ಬೇಗ್ ಅವರು ಮಧ್ಯಪ್ರದೇಶದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 1977ರಲ್ಲಿ ಭೂಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಡಾ.ಶಂಕರ‍್ ದಯಾಲ್ ಶರ್ಮರನ್ನು ಸೋಲಿಸುವ ಮೂಲಕ ಮೊದಲ ಬಾರಿ ಲೋಕ ಸಭೆ ಪ್ರವೇಶಿಸಿದ್ದರು. ಬಳಿಕ ಅವರು ಕೇಂದ್ರ ಸಚಿವರಾದರು.
ಆರೀಫ್ ಬೇಗ್ 1989ರಲ್ಲಿ ಬೇತುಲ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಿ ಕಾಂಗ್ರೆಸ್‌ನ ಅಸ್ಲಾಂ ಶೇರ್ ಖಾನ್ ಅವರನ್ನು ಸೋಲಿಸಿ ಎರಡನೆ ಬಾರಿ ಲೋಕಸಭೆ ಪ್ರವೇಶಿಸಿದ್ದರು.
ಆರೀಫ್ ಬೇಗ್ 1996ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಆದರೆ ಕಾಂಗ್ರೆಸ್‌ನಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. 2003ರಲ್ಲಿ ಬಿಜೆಪಿಗೆ ಮರು ಸೇರ್ಪಡೆಗೊಂಡರು. 2013ರಲ್ಲಿ ಭೂಪಾಲ್ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಿದ್ದರು. ಆದರೆ ಅವರು ಸೋಲು ಅನುಭವಿಸಿದರು.
ಆರೀಫ್ ಬೇಗ್ 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹತ್ತೊಂಬತ್ತು ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು.