×
Ad

ನನ್ನ ಅಸಭ್ಯ ವರ್ತನೆಯನ್ನು ಸಹಿಸಿ ನನ್ನನ್ನು ರೂಪಿಸಿದ ಮಹಾನುಭಾವ

Update: 2016-09-05 18:01 IST

ಹೌದು ಆ ಮಹಾನುಭಾವ ವ್ಯಕ್ತಿ ಈಗ ಎಲ್ಲಿದ್ದಾರೋ ನನಗರಿಯದು.ಅವರ ಸ್ವಂತ ಸ್ಥಳದ ಅರಿವು ಕೂಡ ನನಗಿಲ್ಲ.1994 ರ ನೆನಪು.ನಾನಾಗ ಪದವಿ ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದೆ.ತುಂಬಾ ಒರಟು ಹಾಗೂ ಗಲಾಟೆ ಮಾಡುವವರ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಿದ್ದ ನನಗೆ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಎನ್ನುವವರು ಮೂರು ವರ್ಷದ ಪದವಿ ಮುಗಿಯುವವರೆಗೂ ನನ್ನನ್ನು ತಿದ್ದಿ ತೀಡಿ ಮನುಷ್ಯನನ್ನಾಗಿ ರೂಪಿಸಿದರು.

  ನನ್ನ ಕಾಲೇಜು ಲೈಫ್ ನ ಒಂದು ಕಹಿ ಘಟನೆ ಅದು ಹೇಳಲೇ ಬೇಕು.ಅಂದು ಪದವಿಯ 2 ನೆ ವರ್ಷದ ಇಂಗ್ಲಿಷ್ ಭಾಷೆಯ ಪರೀಕ್ಷೆ.ನನಗೆ ಇಂಗ್ಲಿಷ್ ಅಂದರೆ ಸ್ವಲ್ಪವೂ ಹಿಡಿಸದು ಹೇಗಾದರೂ ಮಾಡಿ ಪರೀಕ್ಷೆ ಪಾಸಾದರೆ ಸಾಕಪ್ಪ ಎನ್ನುವಂತಿತ್ತು ನನ್ನ ಸ್ಥಿತಿ.ಪರೀಕ್ಷೆಯಲ್ಲಿ ಕಾಪಿ(ಚೀಟಿ)ತೆಗೆದುಕೊಂಡು ಹೋಗಿದ್ದು ಅದನ್ನು ನೋಡಿ ಹೇಗಾದರೂ ಪರೀಕ್ಷೆ ಬರೆಯಬಹುದು ಎನ್ನುವ ಮೊಂಡು ಧೈರ್ಯ.ಆದರೆ ಅತ್ಯಂತ ಶಿಸ್ತಿನ ಸಿಪಾಯಿಯಂತಿರುವ ಚಂದ್ರಶೇಖರ ಸರ್ ಅವರು ಅಂದು ಪರೀಕ್ಷೆಯ ಕೊಠಡಿ ಮೇಲ್ವಾಚರಣೆಗಾಗಿ ಬಂದಿದ್ದರು.ಎಷ್ಟೇ ಪ್ರಯತ್ನಪಟ್ಟರೂ ಚೀಟಿ ಮಾಡುವುದು ಆಗಲೆ ಇಲ್ಲ.ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದು ಖಾತರಿಯಾಯಿತು.ನನ್ನಂತೆ ಒಂದಿಬ್ಬರು ನನ್ನ ತರಗತಿಯಲ್ಲಿ ಇದ್ದರು.ನಾವೆಲ್ಲ ಕೂಡಿ ರಾತ್ರಿ ವೇಳೆ ಆ ಉಪನ್ಯಾಸಕರು ಉಳಿದುಕೊಂಡಿದ್ದ ಬಾಡಿಗೆ ಮನೆಗೆ ಹೋಗಿ ಅವರ ಮನೆ ಕಿಟಕಿ ಗಾಜುಗಳು,ಮನೆಯ ಮುಂದೆ ಹಾಕಿದ್ದ ವಿದ್ಯುತ್ ಬಲ್ಬ್ ಎಲ್ಲವನ್ನೂ ಒಡೆದು ಹಾಕಿದ್ದಾಯಿತು.ಆ ಕೆಲಸ ಮಾಡಿದ್ದು ನನ್ನ ಪಟಾಲ ಬಳಗ ಎಂದು ತಿಳಿದುಕೊಳ್ಳವಲ್ಲಿ ಅವರಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ.ನನಗೆ ಎಲ್ಲಿಲ್ಲದ ಭಯ ನಾಳೆ ಕಾಲೇಜಿನಲ್ಲಿ ಏನಾಗುವುದೋ,ಪ್ರಾಂಶುಪಾಲರಿಗೆ ದೂರು ನೀಡಿ ನನ್ನನ್ನು ಕಾಲೇಜಿನಿಂದ ಹೊರಹಾಕುವರೋ ಎನ್ನುವ ಭಯ ರಾತ್ರಿ  ನಿದ್ರೆ ಇಲ್ಲದೆ ಮರುದಿನ ಕಾಲೇಜಿಗೆ ಚಕ್ಕರ್ ಕೊಟ್ಟಿದ್ದಾಯಿತು.ಆದರೆ ಎಷ್ಟು ದಿನ ಅಂತ ಹೋಗದ ಇರಬೇಕು.ಮನೆಯವರಿಗೆ ಗೊತ್ತಾಗಿ ಎಲ್ಲಿ ತೊಂದರೆ ಉಂಟಾಗುತ್ತೋ ಎಂಬ ಭಯ ಬೇರೆ.ಮೂರನೇ ದಿನ ನಾನು ಕಾಲೇಜಿಗೆ ಹೋದೆ ನಿರೀಕ್ಷೆಯಂತೆ ಕಾಲೇಜು ಪ್ರಾಂಶುಪಾಲರಿಂದ ಆದೇಶ ಬಂತು.ಅಟೆಂಡರ್ ನನ್ನ ಹೆಸರು ಕರೆದು ಪ್ರಾಂಶುಪಾಲರ ಚೇಂಬರ್ ಗೆ ಬರುವಂತೆ ಸೂಚಿಸಿದ.ನಾನು ಹೆದರುತ್ತಲೇ ಪ್ರಾಂಶುಪಾಲರ ಚೇಂಬರ್ ಗೆ ಹೋದೆ.ಅಲ್ಲಿ ನಾನು ಕಿರುಕುಳಕೊಟ್ಟ ನನ್ನಿಂದ ತೊಂದರೆಗೀಡಾದ ಅವರೆ,ಅವರು ಕುಳಿತುಕೊಂಡಿದ್ದಾರೆ.ಅವರು ನನ್ನನ್ನು ಬಳಿಯಲ್ಲಿ ಕರೆದು ನನ್ನ ಕೈಹಿಡಿದರು.ತಮ್ಮ ಮಕ್ಕಳಿಗೆ ಬುದ್ದಿವಾದ ಹೇಳಿದಂತೆ ನನಗೆ ಬೈಯ್ಗುಳ ನೀಡದೆ ಅತ್ಯಂತ ಆತ್ಮೀಯತೆಯಿಂದ ನನಗೆ ತಿಳಿ ಹೇಳಿದರು. ಬುದ್ದನ ಮನಪರಿವರ್ತನೆಯಾದವನಂತೆ ಚೇಂಬರ್ ನಿಂದ ಹೊರಬಂದೆ.ಅಷ್ಟೇ ಮುಂದಿನ ಎರಡು ವರ್ಷ ಅವರು ನನ್ನ ನೆಚ್ಚಿನ ಗುರುವಾದರು.ವಿಶ್ವವಿದ್ಯಾಲಯಮಟ್ಟದ ಕನ್ನಡ ಭಾಷಣ ಸ್ಪರ್ಧೆಗೆ ಆಯ್ಕೆ ನಡೆದಿತ್ತು.ನನಗೆ ಭಾಷಣವನ್ನು ಬರೆದುಕೊಟ್ಟು ಕಾಲೇಜುಮಟ್ಟದಿಂದ ವಿಶ್ವವಿದ್ಯಾಲಯಮಟ್ಟದ ವರೆಗೂ ಬೆಳೆಸಿದರು.ನನಗೆ ವಿಶ್ವವಿದ್ಯಾಲಯದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟರು.

ಪದವಿಯ ನಂತರ ನಾನು ಅವರನ್ನು ಮತ್ತೆಂದೂ ನೋಡಲಿಲ್ಲ.ಅವರು ಎಲ್ಲಿದ್ದಾರೋ ಹೇಗಿದ್ದಾರೋ ನನಗೆ ತಿಳಿಯದು.ಆದರೆ ನನ್ನನ್ನು ಮನುಷ್ಯನನ್ನಾಗಿ ರೂಪಿಸಿದ ಆ ಮಹಾನ್ಭಾವರವನ್ನು ನಾನು ಗೋಳು ಹಾಕಿಸಿಕೊಂಡಿದ್ದು ಮಾತ್ರ ಇಂದಿಗೂ ನಾನು ಮರೆತಿಲ್ಲ.ನಾನೀಗ ಅದೇ ಶಿಕ್ಷಕ ವೃತ್ತಿಯನ್ನೇ ಆರಿಸಿಕೊಂಡಿದ್ದೇನೆ.ಕೆಲವೊಮ್ಮೆ ನನ್ನ ವಿದ್ಯಾರ್ಥಿಗಳು ನನಗೇನಾದರೂ ಎದರು ಆಡಿದರೆ ನನಗೆ ಕೋಪ ಬರುತ್ತೆ ಅದೇ ಕ್ಷಣ ನನ್ನನ್ನು ರೂಪಿಸಿದ ನನ್ನ ಗುರುಗಳ ನೆನಪಾಗಿ ವಿದ್ಯಾರ್ಥಿಗಳ  ಅಸಭ್ಯ ವರ್ತನೆಗೆ ಬೇಸರ ಪಟ್ಟುಕೊಳ್ಳದೆ ಅವರನ್ನು ಮಾರ್ಗದರ್ಶನ ಮಾಡುತ್ತೇನೆ .ಹಲವಾರು ಬಾರಿ ನನ್ನ ವಿದ್ಯಾರ್ಥಿಗಳಿಗೆ ಆ ಮಹಾನುಭಾವರ ಕುರಿತು ಹೇಳಿದ್ದೇನೆ. ಅವರು ಅಂದು ನನ್ನನ್ನು ಕ್ಷಮಿಸದೇ ಹೋದರೆ ಬಹುಷ ನಾನು ಮುಂದೇ ಕಾಲೇಜು ಪೂರ್ಣಗೊಳಿಸುತ್ತಿದ್ದೇನೋ ಇಲ್ಲವೂ ನನಗರಿಯದು.ಆವರು ಕ್ಷಮಿಸಿ ನನಗೆ ಬೆಳೆಯಲು ಅವಕಾಶ ಕಲ್ಪಸಿದ್ದರು.ಆ ಮಹಾನುಭಾವರು ಮತ್ತೊಮ್ಮೆ ಸಿಗುತ್ತಾರೋ  ತಿಳಿಯದು.ನನಗೆ ಅವರೊಂದಿಗೆ ಕ್ಷಮೆ ಕೇಳಬೇಕೆಂಬ ಬಯಕೆ.ಏಕೆಂದರೆ ಅಂದು ಕ್ಷಮೆ ಕೇಳಿದೆನೋ ಇಲ್ಲವೋ ನನಗರಿಯದು.ಅವರೊಮ್ಮೆ ಸಿಕ್ಕರೆ ಅವರ ಮುಂದೇ ತಲೆತಗ್ಗಿಸಿ ನಿಂತುಕೊಂಡು ಕ್ಷೇಮೆ ಕೇಳೋಣ ಅನ್ನಿಸುತ್ತೆ.ಆದರೆ ಅವರ ವಿಳಾಸವಾಗಲಿ ಅವರ ಕುರಿತು ಮಾಹಿತಿಯಾಗಲಿ ನನ್ನ ಬಳಿ ಇಲ್ಲ.ಅವರು ಜೀವಂತವಾಗಿದ್ದಾರೂ ಇಲ್ಲವೂ ಅದು ಗೊತ್ತಿಲ್ಲ.ಆದರೆ ಅವರು ಎಲ್ಲಿಯೇ ಇರಲಿ ಸುಖವಾಗಿರಲಿ.ಮತ್ತು ನನ್ನನ್ನೊಮ್ಮೆ ಕ್ಷಮಿಸಲಿ ಎಂದಷ್ಟೆ ನನ್ನ ಪ್ರಾರ್ಥನೆ.

Writer - ಎಂ.ಆರ್.ಮಾನ್ವಿ.

contributor

Editor - ಎಂ.ಆರ್.ಮಾನ್ವಿ.

contributor

Similar News