ಪಟ್ರಮೆಯ ಈ ಹನ್ನೊಂದು ಕುಟುಂಬಗಳ ಪಾಡು ಕೇಳುವವರಾರು ?
ಪಟ್ರಮೆ. ಒಂದು ಕಾಲದ ಕುಗ್ರಾಮ. ಉಪ್ಪಿನಂಗಡಿಯಿಂದ ನೆಲ್ಯಾಡಿ ಹೆದ್ದಾರಿಯ ಮಧ್ಯೆ ಗೋಳಿತೊಟ್ಟು ಎಂಬಲ್ಲಿಂದ ಎಡಕ್ಕೆ ಕೊಕ್ಕಡ ರೋಡಿಗೆ ತಿರುಗಿದರೆ ಸೌತಡ್ಕ ದೇವಸ್ಥಾನಕ್ಕಿಂದ ಸ್ವಲ್ಪ ಮುಂದೆ ಪಟ್ರಮೆ ಎಂಬ ಹಳ್ಳಿ ಪ್ರದೇಶ ಸಿಗುತ್ತದೆ. ಅದೇ ಪಟ್ರಮೆಯ "ಅನಾರ್" ಎಂಬ ಜನತಾ ಕಾಲನಿಯಲ್ಲಿ 11 ಮುಸ್ಲಿಂ ಕುಟುಂಬಗಳಿವೆ. ಆ ಏರಿಯಾಕ್ಕೆ "ಎಂ.ಫ್ರೆಂಡ್ಸ್" ತಂಡ ನಿನ್ನೆ ಭೇಟಿ ನೀಡಿತು.
ಪಟ್ರಮೆ-ಅನಾರ್ ನ ಈ ಹನ್ನೊಂದು ಕುಟುಂಬಗಳ ಶೋಚನೀಯಾವಸ್ಥೆ ಅಕ್ಷರದಲ್ಲಿ ಬಂಧಿಸಿಡಲಸಾಧ್ಯ. ಅವರ ದುಸ್ತರ ಬದುಕನ್ನು ಕಣ್ಣಾರೆ ಕಾಣಬೇಕು. ಛೆ...! ಇಂತಹ ದುರವಸ್ಥೆ ಇನ್ನೂ ಇದೆಯಲ್ಲಾ ಅನ್ನೋದು ಬೇಸರ ತರಿಸುತ್ತದೆ. ಈ 11 ಮನೆಗಳಲ್ಲಿ ಬಹುತೇಕ ಎಲ್ಲಾ ಮನೆಗಳು ಗಂಡಸರಿಲ್ಲದ ಅಭದ್ರತೆಯ ಗೂಡುಗಳು. ಮದುವೆಯಾಗಿ ಎರಡ್ಮೂರು ಮಕ್ಕಳನ್ನು ದಯಪಾಲಿಸಿ ನಾಪತ್ತೆಯಾಗಿರುವ ಗಂಡಂದಿರಿಲ್ಲದ ಅಸಹಾಯಕ ಮಹಿಳೆಯರು. ಹೆಚ್ಚಿನೆಲ್ಲಾ ಗುಡಿಸಲುಗಳು ಮಣ್ಣಿನ ಇಟ್ಟಿಗೆಯಿಂದ ರಚಿತವಾದ ಸರಿಯಾದ ಮಾಡು, ಬಾಗಿಲುಗಳಿಲ್ಲದ 100 ಚದರಡಿಯೊಳಗಿನ ಕುಟೀರಗಳು. (ನಮ್ಮ ಬಾತ್ ರೂಮ್ ಗಿಂತ ಸಣ್ಣ ಮನೆ.) ಒಂದೇ ಕೋಣೆಯಾಕಾರದ ಮನೆಯಲ್ಲಿ ಅಡುಗೆ, ವಿಶ್ರಮ ಎಲ್ಲವೂ. ಸಿಮೆಂಟು, ಸಾರಣೆ ಅನ್ನೋದು ಮರೀಚಿಕೆ. ಕೆಲವು ಮನೆಗಳಲ್ಲಿ ಮದುವೆಯಾಗದೆ ಉಳಿದಿರುವ ಹದಿಹರೆಯದ ಹೆಣ್ಮಕ್ಕಳು. ಒಪ್ಪೊತ್ತಿನ ಊಟಕ್ಕೆ ಸೊಪ್ಪು ಕಡಿಯುವ, ತೋಟದ ಕೆಲಸಕ್ಕೆ ತೆರಳುವ ಮುಸ್ಲಿಂ ಹೆಂಗಸರು. ವಿದ್ಯುತ್ ಸ್ವಿಚ್ ನ್ನು ಸ್ಪರ್ಶಿಸದ, ವಿದ್ಯುತ್ ಬೆಳಕು ಕಾಣದ ಹೊರ ಪ್ರಪಂಚದ ಅರಿವಿಲ್ಲದವರು. ಟಾಯ್ಲೆಟ್, ಬಾತ್ ರೂಮ್ ಇಲ್ಲದೇ ಇತರರ ಮನೆ ಆಶ್ರಯಿಸುವವರು. ಹಣ ಇಲ್ಲದೇ ಅರ್ಧಕ್ಕೇ ನಿಂತ ಎರಡು ಇಟ್ಟಿಗೆಯ ಗುಡಿಸಲುಗಳು. ಗಂಡಸರಿಲ್ಲದೆ, ಕೆಲಸ ಮಾಡುವವರಿಲ್ಲದೆ ಗಂಜಿಗೂ ತತ್ವಾರ ಪಡುವ ಅಸಹಾಯಕರು. ಹೀಗೇ ಈ ಹನ್ನೊಂದು ಮನೆಗಳ ಚಿತ್ರಣ ಒಂದಕ್ಕೊಂದು ವಿಚಿತ್ರ. ಯಾರಿಗೆ ಕೈ ಚಾಚಲಿ? ಯಾರಲ್ಲಿ ಹೇಳಲಿ? ನಮ್ಮ ಸಂಕಟವಾ... ಅನ್ನೋದು ಇವರ ಮುಖದಿಂದಲೇ ವ್ಯಕ್ತವಾಗುತ್ತದೆ.
ನಿನ್ನೆ (04/09) ಎಂ.ಫ್ರೆಂಡ್ಸ್ ನ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಅಬೂಬಕರ್ ನೋಟರಿ, ಕೆ.ಪಿ. ಸಾದಿಕ್ ಪುತ್ತೂರು, ಹನೀಫ್ ರಿಚ್ಮಂಡ್ ಕುದ್ದುಪದವು, ಮಿಲೇನಿಯಂ ಫ್ರೆಂಡ್ಸ್ ನ ಇಸ್ಮಾಯಿಲ್ ಕೋಲ್ಪೆ ಪಟ್ರಮೆಯ ಕುಟುಂಬಗಳ ಅಸಹನೀಯ ಸನ್ನಿವೇಶವನ್ನು ಕಣ್ಣಾರೆ ಕಂಡಿದ್ದಾರೆ. ಇಲ್ಲಿನ 5 ಮನೆಗಳಿಗೆ ಟಾಯ್ಲೆಟ್ ನಿರ್ಮಿಸಲು "ಬಿಡಬ್ಲ್ಯುಎಫ್" ಅಬುದಾಬಿ ಘಟಕ ಮುಂದೆ ಬಂದಿದೆ. ಎಂ.ಫ್ರೆಂಡ್ಸ್ ಹಾಗೂ ಕೋಲ್ಪೆ ಮಿಲೇನಿಯಂ ಫ್ರೆಂಡ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಜೊತೆಗೆ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ನಿರ್ಮಿಸಲು "ಎಂ.ಫ್ರೆಂಡ್ಸ್" ಮುಂದಾಗಿದೆ. ಇವಿಷ್ಟಕ್ಕೆ ಸದ್ಯದಲ್ಲೇ ಚಾಲನೆ ಕೂಡಾ ಸಿಗಲಿದೆ. ಆದರೆ ಈ ಹನ್ನೊಂದು ಮನೆಗಳ ಸಮಸ್ಯೆ ಬೆಟ್ಟದಷ್ಟು. ಇಲ್ಲಿನ ಕೆಲ ಮನೆಗಳಿಗೆ ನಿರಂತರ ರೇಷನ್, ಎರಡ್ಮೂರು ಮನೆಗಳ ನಿರ್ಮಾಣ, ಇಬ್ಬರು ಹರೆಯದ ಹೆಣ್ಮಕ್ಕಳ ಮದುವೆ, ಮಕ್ಕಳ ವಿಧ್ಯಾಭ್ಯಾಸಕ್ಕೆ ಉತ್ತೇಜನ, ಎಲ್ಲಾ ಮನೆಗಳ ಒಳಗೆ ಸಾರಣೆ ವ್ಯವಸ್ಥೆ ತುರ್ತಾಗಿ ಆಗಬೇಕಾದ ಬೇಡಿಕೆಗಳು. ಈ ಬಗ್ಗೆ ನಮ್ಮ ಸಮುದಾಯದ ಸಹೃದಯರು ಮುಂದೆ ಬಂದರೆ ಪಟ್ರಮೆ-ಅನಾರ್ ನ ಆ ಹನ್ನೊಂದು ಕುಟುಂಬವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು. ಈ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಹನೀಫ್ ಹಾಜಿ ಅವರ 9980880860 ನಂಬ್ರವನ್ನು ಅಥವಾ ನೇರವಾಗಿ ತೆರಳಿ ಪಟ್ರಮೆ ಕುಟುಂಬವನ್ನು ಸಂಪರ್ಕಿಸಬಹುದು.