×
Ad

ಕಾಲೇಜಿನಲ್ಲಿ ದಲಿತರಿಗೆ ಪ್ರತ್ಯೇಕ ಬಯೋಮೆಟ್ರಿಕ್ ವ್ಯವಸ್ಥೆ !

Update: 2016-09-06 11:03 IST

ಲುಧಿಯಾನ, ಸೆ.6: ಜಾಗ್ರೌನ್ ನಗರದಲ್ಲಿರುವ ಲಜಪತ್ ರಾಯ್ ಡಿಎವಿ ಕಾಲೇಜಿನ ಆಡಳಿತವು ದಲಿತ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿರುವುದರ ವಿರುದ್ಧ ಸಂಸ್ಥೆಯ ದಲಿತ ವಿದ್ಯಾರ್ಥಿಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಈ ಹೊಸ ವ್ಯವಸ್ಥೆ ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿದ್ದು, ತರಗತಿಗಳಿಗೆ ನಿಯಮಿತವಾಗಿ ಹಾಜರಾಗದ ಹಾಗೂ ಶೇ. 90 ಕ್ಕಿಂತ ಕಡಿಮೆ ಹಾಜರಿ ದಾಖಲಿಸಿದ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಮೆಟ್ರಿಕ್ ನಂತರದ ಸ್ಕಾಲರ್ ಶಿಪ್ ಯೋಜನೆಯನ್ವಯ ಯಾವುದೇ ಸವಲತ್ತುಗಳನ್ನು ನೀಡಲಾಗುವುದಿಲ್ಲವೆಂದು ಹೇಳಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾತ್ರ ಸ್ಕಾಲರ್ ಶಿಪ್ ಲಭಿಸುವಂತೆ ನೋಡಿಕೊಳ್ಳುವ ಸಲುವಾಗಿ ಅವರ ಹಾಜರಿ ದಾಖಲಿಸಲು ಅನುವಾಗುವಂತೆ ಪಂಜಾಬ್ ಶಿಕ್ಷಣ ಇಲಾಖೆಯ ಲಿಖಿತ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ. ಕರಣ್ ಶರ್ಮ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳ ವಿರೋಧವನ್ನು ಗಮನದಲ್ಲಿರಿಸಿಕೊಂಡು ಸರಕಾರದಿಂದ ಮುಂದಿನ ನಿರ್ದೇಶನ ಬರುವ ತನಕ ಈ ಹೊಸ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ, ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಾಂಶುಪಾಲರು ಹೇಳಿದಂತೆ ಪಂಜಾಬ್ ಶಿಕ್ಷಣ ಇಲಾಖೆಯ ನಿರ್ದೇಶಕರಿಂದ ಫೆಬ್ರವರಿ 10 ರಂದು ಪತ್ರ ಬಂದಿತ್ತಾದರೂ ಅದು ಯಾವುದೇ ನಿರ್ದಿಷ್ಟ ಸ್ಕಾಲರ್ ಶಿಪ್ ಯೋಜನೆಯ ಬಗ್ಗೆ ಉಲ್ಲೇಖಿಸಿಲ್ಲವಾದರೂ ಎಲ್ಲಾ ಕೋರ್ಸುಗಳ ಹಾಗೂ ತರಗತಿಗಳ ಎಲ್ಲಾ ವಿದ್ಯಾರ್ಥಿಗಳ ಹಾಜರಿಯನ್ನು ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕೆಂದು ಅದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಎಲ್ಲಿಯೂ ಈ ವ್ಯವಸ್ಥೆ ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲು ಎಂದು ಹೇಳಿಲ್ಲ, ಎಂದು ಪಂಜಾಬ್ ಸ್ಟೂಡೆಂಟ್ಸ್ ಯೂನಿಯನ್‌ ಕಾರ್ಯದರ್ಶಿ ಹಾಗೂ ಈ ಕಾಲೇಜಿನ ವಿದ್ಯಾರ್ಥಿ ಕರಮ್ ಜೀತ್ ಸಿಂಗ್ ಹೇಳಿದ್ದಾರೆ.

ಆದರೆ, ಶೇ.90 ಕ್ಕಿಂತ ಕಡಿಮೆ ಹಾಜರಿ ಇರುವವರಿಗೆ ಯೋಜನೆಯ ಪ್ರಯೋಜನ ಲಭ್ಯವಾಗದು ಎಂಬ ದೂರಿಗೆ ಸ್ಪಂದಿಸಿದ ಪ್ರಿನ್ಸಿಪಾಲ್ ಶರ್ಮ, ಯೋಜನೆಯ ಪ್ರಯೋಜನ ಪಡೆಯಲು ಶೇ.65 ಹಾಜರಿ ಕಡ್ಡಾಯವೆಂದು ತಾವು ತಿಳಿಸಿದ್ದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News