ಬಾಂಗ್ಲಾ ಜಮಾಅತ್ ನಾಯಕನ ಗಲ್ಲಿಗೆ 'ಬ್ರದರ್‌ಹುಡ್ ' ಖಂಡನೆ

Update: 2016-09-06 14:36 GMT

ಕೈರೋ, ಸೆ. 6: ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿ ಪಕ್ಷದ ಹಿರಿಯ ನಾಯಕ ಹಾಗೂ ಉದ್ಯಮಿ ಮಿರ್ ಕಾಸಿಮ್ ಅಲಿ ಅವರನ್ನು ಗಲ್ಲಿಗೇರಿಸಿರುವುದನ್ನು ಈಜಿಪ್ಟ್‌ನ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಯ ಉಪ ಮುಖ್ಯಸ್ಥ ಇಬ್ರಾಹೀಮ್ ಮುನೀರ್ ಸೋಮವಾರ ಖಂಡಿಸಿದ್ದಾರೆ.

ಅಲಿ ಅವರ ಮರಣ ದಂಡನೆಯು ‘‘ನ್ಯಾಯೋಚಿತವಲ್ಲದ ರಾಜಕೀಯ ವಿಚಾರಣೆಗಳ ಅನ್ಯಾಯ ಮತ್ತು ಆಕ್ರಮಣಶೀಲತೆಯನ್ನು’’ ಬಿಂಬಿಸುತ್ತದೆ ಎಂದು ಹೇಳಿಕೆಯೊಂದರಲ್ಲಿ ಮುನೀರ್ ಹೇಳಿದ್ದಾರೆ.

ಎಲ್ಲ ಮಾನವಹಕ್ಕು ಸಂಘಟನೆಗಳು, ಅಂತಾರಾಷ್ಟ್ರೀಯ ವೀಕ್ಷಕರು ಮತ್ತು ಬಾಂಗ್ಲಾದೇಶಿ ರಾಜಕೀಯ ಪಕ್ಷಗಳು ಅಲಿ ಅವರ ಮರಣ ದಂಡನೆಯನ್ನು ಖಂಡಿಸಿವೆ, ಯಾಕೆಂದರೆ, ಅದು ರಾಜಕೀಯ ದುರುದ್ದೇಶಗಳನ್ನು ಹೊಂದಿತ್ತು ಹಾಗೂ ನ್ಯಾಯದ ರಕ್ಷಣೆಗೆ ಅಲ್ಲಿ ವ್ಯವಸ್ಥೆಯಿರಲಿಲ್ಲ ಎಂದು ಮುನೀರ್ ಆರೋಪಿಸಿದ್ದಾರೆ.

45 ವರ್ಷಗಳ ಹಿಂದೆ, 1971ರಲ್ಲಿ ಬಾಂಗ್ಲಾದೇಶ ವಿಮೋಚನಾ ಯುದ್ಧದ ವೇಳೆ ಯುದ್ಧಾಪರಾಧಗಳನ್ನು ಮಾಡಿರುವ ಆರೋಪದಲ್ಲಿ ಅಲಿ ಅವರನ್ನು ಶನಿವಾರ ಗಲ್ಲಿಗೇರಿಸಲಾಗಿತ್ತು.

ಟರ್ಕಿ ಖಂಡನೆ

ಅಂಕಾರ, ಸೆ. 6: ಬಾಂಗ್ಲಾದೇಶದ ಜಮಾತೆ ಇಸ್ಲಾಮಿ ಪಕ್ಷದ ನಾಯಕ ಮಿರ್ ಕಾಸಿಮ್ ಅಲಿ ಅವರನ್ನು ಮರಣ ದಂಡನೆಗೆ ಗುರಿಪಡಿಸಿರುವುದನ್ನು ಟರ್ಕಿ ಖಂಡಿಸಿದೆ.

‘‘ಇಂಥ ಕ್ರಮಗಳಿಂದ ಹಳೆಯ ಗಾಯಗಳನ್ನು ಗುಣಪಡಿಸಲು ಸಾಧ್ಯವಿಲ್ಲ’’ ಎಂದು ರವಿವಾರ ಪ್ರಕಟಗೊಂಡ ಹೇಳಿಕೆಯೊಂದರಲ್ಲಿ ಟರ್ಕಿಯ ವಿದೇಶ ಸಚಿವಾಲಯ ಹೇಳಿದೆ.

ಮಿರ್ ಕಾಸಿಮ್ ಅಲಿ ಯುದ್ಧಾಪರಾಧಗಳಿಗಾಗಿ ಗಲ್ಲಿಗೇರಿಸಲ್ಪಟ್ಟ ಬಾಂಗ್ಲಾದೇಶದ ಜಮಾತೆ ಇಸ್ಲಾಮಿ ಪಕ್ಷದ ಆರನೆ ನಾಯಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News