ನಾರ್ವೆ: ಹಿಜಾಬ್‌ಧಾರಿಣಿಯನ್ನು ಸೆಲೂನ್‌ನಿಂದ ಹೊರದಬ್ಬಿದ ಮಹಿಳೆ

Update: 2016-09-06 17:07 GMT

ಲಂಡನ್, ಸೆ. 6: ಹಿಜಾಬ್‌ಧಾರಿ ಮಹಿಳೆಯೊಬ್ಬರನ್ನು ತನ್ನ ಸೆಲೂನ್‌ನಿಂದ ಹೊರದಬ್ಬಿದ ನಾರ್ವೆಯ 47 ವರ್ಷದ ಮಹಿಳೆಯೊಬ್ಬಳು 800 ಪೌಂಡ್ ದಂಡ ಪಾವತಿಸಲು ನಿರಾಕರಿಸಿದ್ದು, ಆರು ತಿಂಗಳ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಯಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಈ ಘಟನೆ ನಡೆದಿದ್ದು, ಈ ವಾರ ಆರೋಪಿ ಮಹಿಳೆ ಮೆರಿಟ್ ಹಾಡನ್ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

‘‘ಇಸ್ಲಾಮ್ ಎನ್ನುವುದು ಕೆಡುಕು. ಮಲಿಕಾ ಬಯನ್‌ರನ್ನು ಹೊರದಬ್ಬದಿದ್ದರೆ ನಾನು ಇತರ ಗ್ರಾಹಕರ ವಿರುದ್ಧ ತಾರತಮ್ಯ ನಡೆಸಿದಂತಾಗುತ್ತಿತ್ತು’’ ಎಂದು ಹಾಡನ್ ಹೇಳಿದ್ದಾಳೆ.

ಕೂದಲಿಗೆ ಬಣ್ಣ ಹಚ್ಚಲು ಎಷ್ಟು ಖರ್ಚು ತಗಲುತ್ತದೆ ಎಂದು ಕೇಳಲು 23 ವರ್ಷದ ಮಲಿಕಾ ಬಯನ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬ್ರೈನ್ ಪಟ್ಟಣದಲ್ಲಿರುವ ಹಾಡನ್‌ಳ ಸೆಲೂನ್‌ಗೆ ಹೋಗಿದ್ದರು. ಆದರೆ, ತನ್ನ ಅಂಗಡಿಯಿಂದ ಹೊರ ಹೋಗುವಂತೆ ಆಕೆಗೆ ಹಾಡನ್ ಹೇಳಿದಳು ಎಂದು ‘ಡೇಲಿ ಎಕ್ಸ್‌ಪ್ರೆಸ್’ ಇಂದು ವರದಿ ಮಾಡಿದೆ.

‘‘ಸ್ವತಂತ್ರ ದೇಶವೊಂದರಲ್ಲಿ ಆಕೆ ಈ ರೀತಿಯಾಗಿ ಜನರ ನಡುವೆ ತಾರತಮ್ಯ ನಡೆಸುತ್ತಿರುವುದು ಆಘಾತಕರ. ನಾರ್ವೆ ನನ್ನ ದೇಶ. ಇಸ್ಲಾಮ್ ಮಹಿಳೆಯರನ್ನು ದೌರ್ಜನ್ಯಕ್ಕೆ ಈಡು ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಆದರೆ, ಅವರೇ ನನ್ನ ಮೇಲೆ ದೌರ್ಜನ್ಯ ಮಾಡಿದರು’’ ಎಂದು ಮಲಿಕಾ ಹೇಳುತ್ತಾರೆ.

ಪೊಲೀಸರು ಎಪ್ರಿಲ್‌ನಲ್ಲಿ ಹಾಡನ್‌ಗೆ 800 ಪೌಂಡ್ ದಂಡ ವಿಧಿಸಿದ್ದರು. ಆದರೆ, ಅದನ್ನು ಪಾವತಿಸಲು ಆಕೆ ನಿರಾಕರಿಸಿದ್ದಾಳೆ. ಹಾಗಾಗಿ, ಆಕೆ ಇನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News