ಪ್ರಧಾನಿಗೆ ಕಾಶ್ಮೀರ ಪರಿಸ್ಥಿತಿ ವಿವರಿಸಿದ ರಾಜನಾಥ್
Update: 2016-09-06 23:51 IST
ಹೊಸದಿಲ್ಲಿ, ಸೆ.6: ಎರಡು ದಿನಗಳ ಜಮ್ಮುಕಾಶ್ಮೀರ ಭೇಟಿಯ ಬಳಿಕ ಮಂಗಳವಾರ ಹೊಸದಿಲ್ಲಿಗೆ ವಾಪಸಾಗಿರುವ ಕೇಂದ್ರ ಗೃಹ ಸಚಿವ ರಾಜನಾಥಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕಣಿವೆ ರಾಜ್ಯದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
ಸುಮಾರು ಒಂದು ತಾಸು ಕಾಲ ನಡೆದ ಮಾತುಕತೆಯಲ್ಲಿ ಸೆಪ್ಟಂಬರ್ 4 ಹಾಗೂ 5ರಂದು ಶ್ರೀನಗರ ಹಾಗೂ ಜಮ್ಮುವಿಗೆ ಸರ್ವಪಕ್ಷ ನಿಯೋಗದ ಭೇಟಿಯ ವಿವರಗಳನ್ನು ಕೂಡಾ ಗೃಹ ಸಚಿವರು ಪ್ರಧಾನಿಗೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ಚೀನಾ ಹಾಗೂ ವಿಯೆಟ್ನಾಂ ಪ್ರವಾಸ ಮುಗಿಸಿ, ಸೋಮವಾರ ರಾತ್ರಿ ಹೊಸದಿಲ್ಲಿಗೆ ಆಗಮಿಸಿದ್ದರೆ, ಗೃಹ ಸಚಿವ ರಾಜನಾಥ ಸಿಂಗ್ ಕೂಡಾ ಸೋಮವಾರ ಸಂಜೆ ಶ್ರೀನಗರದಿಂದ ಹಿಂದಿರುಗಿದ್ದರು. ಸರ್ವಪಕ್ಷ ನಿಯೋಗದ ಸದಸ್ಯರು ಬುಧವಾರ ಸಭೆ ಸೇರಿ ಕಾಶ್ಮೀರ ಭೇಟಿಯ ವೇಳೆ ತಾವು ಕಂಡುಕೊಂಡ ಅಂಶಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆಯೆಂದು ಮೂಲಗಳು ತಿಳಿಸಿವೆ.