ರಾಹುಲ್ ಸಭೆಗೆ ತಂದಿದ್ದ ಮಂಚಗಳನ್ನು ಮನೆಗೆ ಹೊತ್ತೊಯ್ದ ಗ್ರಾಮಸ್ಥರು!
ದಿಯೋರಿಯಾ, ಸೆ.6: ಮುಂದಿನ ವರ್ಷ ಚುನಾವಣೆಗೆ ಸಜ್ಜಾಗಲು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ನಡೆಸಲಿರುವ ‘ಕಿಸಾನ್ ಯಾತ್ರೆ’ಗೆ ಪೂರ್ವಭಾವಿಯಾಗಿ ಸೋಮವಾರ ರುದ್ರಾಪುರ ಜಿಲ್ಲೆಯ ದಿಯೋರಿಯಾದಲ್ಲಿ ಆಯೋಜಿಸಿದ್ದ ‘ಕಾಟ್ ಸಭಾ’ಗಾಗಿ ತರಲಾಗಿದ್ದ ಮಂಚಗಳನ್ನು ಜನರು ಮನೆಗೆ ಹೊತ್ತೊಯ್ದಿದ್ದರಿಂದ, ಇಡೀ ಸಮಾವೇಶ ಗೊಂದಲದ ಗೂಡಾಯಿತು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಸಭೆಯನ್ನುದ್ದೇಶಿಸಿ ಭಾಷಣ ಮಾಡು ತ್ತಿದ್ದಂತೆಯೇ, ಜನರು ಮಂಚಗಳನ್ನು ಮನೆಗೆ ಒಯ್ಯುತ್ತಿರುವ ದೃಶ್ಯಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದವು.
ದಿಯೋರಿಯಾದಲ್ಲಿ ನಡೆದ ಸಭೆಗಾಗಿ ಸುಮಾರು 1 ಸಾವಿರ ಮಂಚಗಳನ್ನು ಏರ್ಪಾಡು ಮಾಡಲಾಗಿತ್ತು. ಆದರೆ ಈ ಮಂಚಗಳನ್ನು ಸಾರ್ವಜನಿಕರಿಗೆ ವಿತರಿಸಲು ತರಲಾಗಿತ್ತೇ ಎಂಬ ಬಗ್ಗೆ ಕಾಂಗ್ರೆಸ್ ಪಕ್ಷವು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ರಾಹುಲ್ ಆನಂತರ ಕುಶಿನಗರ್‌ನಲ್ಲಿ ನಡೆಸಿದ ‘ಕಾಟ್ ಸಭಾ’ದಲ್ಲೂ ಗ್ರಾಮಸ್ಥರು, ರಾಹುಲ್ ಭಾಷಣ ಮುಗಿಸಿದ ಕೂಡಲೇ ಮಂಚಗಳನ್ನು ಒಯ್ಯುತ್ತಿರುವ ದೃಶ್ಯಗಳು ಟ್ವಿಟರ್‌ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದವು. ಸಭೆ ನಡೆದ ಸ್ಥಳದಲ್ಲಿ ಜನರು ಮಂಚಗಳಿಗಾಗಿ ಮೇಲಾಟ ನಡೆಸುತ್ತಿರುವ ದೃಶ್ಯಗಳುಳ್ಳ ಫೋಟೊಗಳು ಕೂಡಾ ಪ್ರಸಾರವಾಗಿವೆ.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಸಭೆಯಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಪರ ಒಲವು ಹೊಂದಿ ದ್ದಾರೆಂದು ಟೀಕಿಸಿದರು. ಪ್ರಧಾನಿ ಶ್ರೀಮಂತರ ಸಾಲವನ್ನು ಮನ್ನಾ ಮಾಡಲು ಬಯಸುತ್ತಿದ್ದಾರೆ. ಆದರೆ ಬಡವರ ಸಾಲ ಮನ್ನಾ ಮಾಡಲು ಅವರು ಸಿದ್ಧರಿಲ್ಲವೆಂದು ರಾಹುಲ್ ಕಟಕಿಯಾಡಿದರು.
‘ಕಿಸಾನ್ ಯಾತ್ರೆ’ಯು ಉತ್ತರಪ್ರದೇಶದ 39 ಜಿಲ್ಲೆಗಳ ಒಟ್ಟು 59 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ.