×
Ad

ರಾಜೀನಾಮೆ ನೀಡುವುದಿಲ್ಲ, ರಾಷ್ಟ್ರಪತಿಗಳೇ ವಜಾಗೊಳಿಸಲಿ

Update: 2016-09-06 23:55 IST

ಗುವಾಹಟಿ, ಸೆ.6: ಅರುಣಾಚಲ ಪ್ರದೇಶದ ರಾಜ್ಯಪಾಲ ಜ್ಯೋತಿಪ್ರಸಾದ ರಾಜಖೋವಾ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದು, ರಾಷ್ಟ್ರಪತಿಗಳೇ ತನ್ನನ್ನು ವಜಾಗೊಳಿಸಲಿ ಎಂದು ಹೇಳಿದ್ದಾರೆ. ‘ಅನಾರೋಗ್ಯದ ಕಾರಣ’ಗಳನ್ನು ನೀಡಿ ರಾಜೀನಾಮೆ ಸಲ್ಲಿಸುವಂತೆ ಕೇಂದ್ರವು ಅವರಿಗೆ ಸೂಚಿಸಿದೆ ಎನ್ನಲಾಗಿದೆ.

ರವಿವಾರ ಇಲ್ಲಿಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಾಜಖೋವಾ, ರಾಷ್ಟ್ರಪತಿಗಳು ತಮ್ಮ ಅಸಂತುಷ್ಟಿಯನ್ನು ವ್ಯಕ್ತಪಡಿಸಲಿ. ತನ್ನ ವಜಾಕ್ಕೆ ಸರಕಾರವು ಸಂವಿಧಾನದ 156ನೆ ವಿಧಿಯನ್ನು ಬಳಸಿಕೊಳ್ಳಲಿ ಎಂದರು.
ಕೆಲವು ವಾರಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಮರುಸ್ಥಾಪಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅದರ ಪತನಕ್ಕೆ ಕಾರಣವಾಗಿದ್ದ ರಾಜ್ಯಪಾಲ ರಾಜಖೋವಾ ಅವರ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿತ್ತಲ್ಲದೆ, ಅವರಿಗೆ ಛೀಮಾರಿಯನ್ನೂ ಹಾಕಿತ್ತು.
 ಅನಾರೋಗ್ಯದಿಂದ ತಾನು ಸಂಪೂರ್ಣ ವಾಗಿ ಚೇತರಿಸಿಕೊಂಡಿದ್ದು, ಆ.13ರಿಂದ ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದೇನೆ. ತಾನು ಹುದ್ದೆಯನ್ನು ತೊರೆಯಬೇಕೆಂದು ಪ್ರಧಾನಿ ಮತ್ತು ಅವರ ಸಂಪುಟ ಬಯಸಿದ್ದರೆ ಅವರು ಅದನ್ನು ರಾಷ್ಟ್ರಪತಿಗಳಿಗೆ ತಿಳಿಸಬೇಕು ಮತ್ತು ಆಗ ಅವರು ಸಂವಿಧಾನದ ನಿರ್ದಿಷ್ಟ ನಿಯಮದಡಿ ಆದೇಶವನ್ನು ಹೊರಡಿಸುತ್ತಾರೆ. ಸರಕಾರದ ನಾಲ್ಕನೆ ದರ್ಜೆಯ ನೌಕರನನ್ನು ವಜಾಗೊಳಿಸಬೇಕಿದ್ದರೂ ಸರಕಾರ ಲಿಖಿತವಾಗಿ ತಿಳಿಸುತ್ತದೆ. ತಾನು ರಾಜ್ಯಪಾಲನಾಗಿದ್ದೇನೆ ಮತ್ತು ಇದು ಸಾಂವಿಧಾನಿಕ ಹುದ್ದೆಯಾಗಿದೆ ಎಂದು ರಾಜಖೋವಾ ಹೇಳಿದರು.
ಆ.27ರಂದು ರಾತ್ರಿ ಗುವಾಹಟಿಯ ಗಣ್ಯವ್ಯಕ್ತಿಯೋರ್ವರು ತನಗೆ ಕರೆ ಮಾಡಿ ಆರೋಗ್ಯದ ಕಾರಣ ನೀಡಿ, ತಾನು ರಾಜೀನಾಮೆ ಸಲ್ಲಿಸಬೇಕು ಎಂದು ಸರಕಾರವು ಬಯಸಿದೆ ಎಂದು ತಿಳಿಸಿದ್ದರು. ಆಘಾತಗೊಂಡ ತಾನು ತನ್ನ ರಾಜೀನಾಮೆಯನ್ನು ಬಯಸಿರುವ ವ್ಯಕ್ತಿ ತನಗೇ ನೇರವಾಗಿ ಕರೆ ಮಾಡಲಿ ಎಂದು ಅವರಿಗೆ ತಿಳಿಸಿದ್ದೆ. ಆದರೆ ಅಂತಹ ಯಾವುದೇ ಕರೆ ಬಾರದಿದ್ದಾಗ ತಾನು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಕರೆ ಮಾಡಿ ಈ ಸುದ್ದಿ ನಿಜವೇ ಎಂದು ಪ್ರಶ್ನಿಸಿದ್ದೆ. ಆದರೆ ಆ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಹೇಳಿದ್ದ ಅವರು ತನ್ನ ಕಾರ್ಯ ನಿರ್ವಹಣೆಯನ್ನು ಪ್ರಶಂಸಿಸಿದ್ದರು. ಆದರೆ ತಾನು ಇನ್ನೋರ್ವ ಕೇಂದ್ರ ಸಚಿವರಿಗೆ ಕರೆ ಮಾಡಿದ್ದೆ ಮತ್ತು ಆ.30ರಂದು ತನಗೆ ವಾಪಸ್ ಕರೆ ಮಾಡಿದ್ದ ಅವರು ಉನ್ನತ ಮಟ್ಟದಲ್ಲಿ ನಿರ್ಧಾರವಾಗಿದೆ ಮತ್ತು ಆ.31ರೊಳಗೆ ಹುದ್ದೆಯನ್ನು ತೆರವುಗೊಳಿಸುವಂತೆ ತಿಳಿಸಿದ್ದರು ಎಂದು ಅವರು ವಿವರಿಸಿದರು.
ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಒಂದೇ ಒಂದು ಕಳಂಕವಿಲ್ಲ. ರಾಜ್ಯಪಾಲ ಹುದ್ದೆಗಾಗಿ ಪ್ರಧಾನಿ ಅಥವಾ ಸ್ಥಳೀಯ ಮಟ್ಟದಲ್ಲಿ ಯಾವುದೇ ಬಿಜೆಪಿ ನಾಯಕನ್ನು ತಾನು ಸಂಪರ್ಕಿಸಿರಲಿಲ್ಲ. ಕೇಂದ್ರದ ನಿರ್ಧಾರ ತನಗೆ ಅವಮಾನವನ್ನುಂಟು ಮಾಡಿದೆ ಎಂದ ಅವರು, ತನ್ನನ್ನು ವಜಾಗೊಳಿಸಿ ರಾಷ್ಟ್ರಪತಿಗಳ ಆದೇಶ ಕೈ ಸೇರಿದ ತಕ್ಷಣ ರಾಜಭವನವನ್ನು ಖಾಲಿ ಮಾಡುವುದಾಗಿ ಹೇಳಿದರು.
ರಾಜಖೋವಾ ಈ ಹಿಂದೆ ಅಸ್ಸಾಂ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News