ಮೆಟ್ರೊ ನಿಲ್ದಾಣದಲ್ಲಿ ಬಾಲ ಆತ್ಮಹತ್ಯಾ ಬಾಂಬರ್ ಅಲರ್ಟ್!
ಹೊಸದಿಲ್ಲಿ, ಸೆ.7: ಹತ್ತರಿಂದ ಹದಿನಾಲ್ಕು ವರ್ಷದೊಳಗಿನ ಬಾಲಕನೊಬ್ಬ ತನ್ನ ಶಾಲಾ ಬ್ಯಾಗ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕದೊಂದಿಗೆ ಮೆಟ್ರೋ ನಿಲ್ದಾಣ ಸ್ಫೋಟಿಸಲು ಸಂಚು ಹೂಡಿದ್ದಾನೆ ಎಂಬ ಗುಪ್ತಚರ ವರದಿಯ ಹಿನ್ನೆಲೆಯಲ್ಲಿ ಇಲ್ಲಿನ ರಾಜಜೀವ್ ಚೌಕ್ ಮೆಟ್ರೊ ನಿಲ್ದಾಣದಲ್ಲಿ ಆತಂಕದ ವಾತಾವರಣ ಮನೆ ಮಾಡಿತ್ತು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾದರು.
ತಕ್ಷಣ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ತಂಡಕ್ಕೆ ಕರೆ ಮಾಡಲಾಯಿತು. ಶ್ವಾನದಳದೊಂದಿಗೆ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಯಿತು. ಹೆಚ್ಚುವರಿ ಸಿಬ್ಬಂದಿಯನ್ನು ನಿಲ್ದಾಣದ ಹೊರಗೆ ನಿಯೋಜಿಸಲಾಯಿತು. ಸಂಶಯಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ ನಿಗಾ ವಹಿಸಲು ಕೆಲ ಅಧಿಕಾರಿಗಳನ್ನು ಮಫ್ತಿಯಲ್ಲೂ ನಿಯೋಜಿಸಲಾಯಿತು.
ದಿಲ್ಲಿ ಪೊಲೀಸರಿಗೆ ಈ ಮಾಹಿತಿ ಸೋಮವಾರ ರಾತ್ರಿಯೇ ದೊರಕಿದ್ದರೂ, ಮಂಗಳವಾರ ಮಧ್ಯಾಹ್ನ 2 ಗಂಟೆಯ ವೇಳೆ ಪೊಲೀಸ್ ಪೇದೆಯೊಬ್ಬ ಈ ಮಾಹಿತಿಯೊಂದಿಗೆ ನಿಲ್ದಾಣಕ್ಕೆ ಆಗಮಿಸಿದ್ದಾಗಿ ಸಿಐಎಸ್‌ಎಫ್ ಆಪಾದಿಸಿದೆ. ಆದರೆ ವೃತ್ತ ನಿರೀಕ್ಷಕರ ಕಚೇರಿ ಇದನ್ನು ಅಲ್ಲಗಳೆದಿದ್ದು, ಸೋಮವಾರ ಇ-ಮೇಲ್ ಮಾಹಿತಿ ಬಂದಿದ್ದು, ತಕ್ಷಣ ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ. "ಸಿಐಎಸ್‌ಎಫ್‌ಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು ಹಾಗೂ ನಮ್ಮ ಕಡೆಯಿಂದ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು" ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಯಾವುದೇ ಅನುಮಾನಕ್ಕೆ ಆಸ್ಪದವಾಗದಂತೆ ಈ ಬಾಲಕ ತನ್ನ ತಾಯಿಯೊಂದಿಗೆ ನಿಲ್ದಾಣ ಪ್ರವೇಶಿಸಿ, ನಿಲ್ದಾಣ ಸ್ಫೋಟಿಸಲು ಸಂಚು ಹೂಡಿದ್ದಾಗಿ ಇ-ಮೇಲ್ ಸಂದೇಶದಲ್ಲಿ ಹೇಳಲಾಗಿತ್ತು. ಆದರೆ ಇದುವರೆಗೂ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.