‘ಕಾವೇರಿಗಾಗಿ ಅಳಬೇಡಿ, ಸಮುದ್ರ ನೀರು ಬಳಸಲು ಯೋಚಿಸಿ’
ಹೊಸದಿಲ್ಲಿ, ಸೆ.7: ‘‘ಕಾವೇರಿ ನದಿಗಾಗಿ ಕಣ್ಣೀರಿಡುವುದನ್ನು ಮೊದಲು ನಿಲ್ಲಿಸಿ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ’’ ಎಂದು ತಮಿಳುನಾಡು ಸರಕಾರಕ್ಕೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.
‘‘ತಮಿಳುನಾಡು ಕಾವೇರಿ ನದಿಗಾಗಿ ಅಳುವುದನ್ನು ಮೊದಲು ನಿಲ್ಲಿಸಬೇಕು.ಅದರ ಬದಲಿಗೆ ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸಿ ಕುಡಿಯಲು ಹಾಗೂ ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಗಮನಹರಿಸಬೇಕು’’ ಎಂದು ಸ್ವಾಮಿ ಬುಧವಾರ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಸರಕಾರ ಭಾರವಾದ ಹೃದಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಉಲ್ಲೇಖಿಸಿ ಸ್ವಾಮಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರಕಾರ ಈ ವರ್ಷ ಕಡಿಮೆ ಕಾವೇರಿ ನೀರು ಬಿಡುಗಡೆ ಮಾಡಿದೆ ಎಂದು ಆರೋಪಿಸಿ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್‌ಗೆ ದೂರು ಸಲ್ಲಿಸಿತ್ತು. ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮುಂದಿನ 10 ದಿನಗಳ ಕಾಲ ಪ್ರತಿ ದಿನ 15,000 ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು.