×
Ad

ಹೋಟೆಲ್ ರೂಮನ್ನೇ ಸುಟ್ಟ ಸ್ಯಾಮ್‌ಸಂಗ್ ಮೊಬೈಲ್

Update: 2016-09-07 16:08 IST

ಸಿಡ್ನಿ, ಸೆ.7: ಹೊಸ ಸ್ಯಾಮ್‌ಸಂಗ್ ನೋಟ್ 7 ಮೊಬೈಲೊಂದು ಚಾರ್ಜ್ ಮಾಡಲು ಇಟ್ಟಿದ್ದಾಗ ಹಠಾತ್ತನೆ ಸ್ಫೋಟಿಸಿ, ಕೊಠಡಿಯಿಡೀ ಈ ಬೆಂಕಿಯಿಂದ ಹಾನಿಯಾಗಿರುವ ಘಟನೆಯೊಂದು ವರದಿಯಾಗಿದೆ.

ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ನಿವಾಸಿ ಥಾಮ್ ಹೂ ಅವರು ಪಶ್ಚಿಮ ಆಸ್ಟ್ರೇಲಿಯ ಭೇಟಿಯಲ್ಲಿದ್ದರು. ಈ ಸಂದರ್ಭದಲ್ಲಿ ಬೆಳಗ್ಗೆ ಮೊಬೈಲ್‌ಚಾರ್ಜ್‌ಗೆ ಇಟ್ಟು ಅವರು ಮಲಗಿದ್ದಾಗ ಇದ್ದಕ್ಕಿದ್ದಂತೆ ಅವರ ಸ್ಯಾಮ್‌ಸಂಗ್ ನೋಟ್ 7 ಹೊಸ ಮೊಬೈಲ್ ಸ್ಫೋಟಿಸಿದೆ. ಅದನ್ನು ಎತ್ತಿ ಎಸೆಯಲು ಪ್ರಯತ್ನಿಸಿದಾಗ ಥಾಮ್ ಅವರ ಕೈ ಬೆರಳುಗಳಿಗೆ ಸುಟ್ಟ ಗಾಯಗಳಾಗಿದ್ದು, ಅವರ ಹೋಟೆಲ್ ಕೊಠಡಿಯ ಬೆಡ್‌ಶೀಟ್‌ಗಳು ಹಾಗೂ ಕಾರ್ಪೆಟ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅವರ ಹೋಟೆಲ್‌ಗೆ ಒಟ್ಟು 1,300 ಡಾಲರ್ ನಷ್ಟವಾಗಿದೆ ಎಂದು ಅವರನ್ನು ಉಲ್ಲೇಖಿಸಿ ವರದಿಯಾಗಿದೆ. ಈ ಹಾನಿಯನ್ನು ತಾನು ಭರಿಸುವುದಾಗಿ ಸ್ಯಾಮ್‌ಸಂಗ್ ಹೇಳಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ನೋಟ್ 7 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅದರ ಬ್ಯಾಟರಿ ಸ್ಫೋಟಿಸಿರುವ 35ಕ್ಕೂ ಅಧಿಕ ಘಟನೆಗಳು ವರದಿಯಾಗಿದ್ದು, ಜಗತ್ತಿನಾದ್ಯಂತ ಈ ಹೊಸ ಫೋನ್‌ನ್ನು ವಾಪಸ್ ಪಡೆಯುವುದಾಗಿ ಸ್ಯಾಮಸಂಗ್ ಪ್ರಕಟಿಸಿದೆ. ಇದರ ಪ್ರಕಾರ ಸ್ಯಾಮ್‌ಸಂಗ್ ನೋಟ್ 7 ಬಳಸುತ್ತಿರುವವರು ಅದನ್ನು ಕೂಡಲೇ ಸ್ವಿಚ್‌ಆಫ್ ಮಾಡಿ ತಾವು ಖರೀದಿಸಿದ ಸ್ಟೋರ್‌ಗೆ ಹೋಗಿ ಅದನ್ನು ಮರಳಿಸುವಂತೆ ಸ್ಯಾಮ್‌ಸಂಗ್ ವಿನಂತಿಸಿದೆ.
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News