ನಿಮ್ಮ ಜೀನ್ಸ್ ಅನ್ನು ಎಷ್ಟು ದಿನಕ್ಕೊಮ್ಮೆ ತೊಳೆಯಬೇಕು?
ಬಟ್ಟೆ ಒಗೆಯುವುದು ಅನಿವಾರ್ಯ. ಆದರೆ ಲಿವೈಸ್ ಸಿಇಒ ಮತ್ತು ಅಧ್ಯಕ್ಷ ಚಿಪ್ ಬರ್ಗ್‌ನಂತವರು ನಮ್ಮ ಜೀವನವನ್ನು ಸರಳಗೊಳಿಸುತ್ತಾರೆ. ಅವರ ಪ್ರಕಾರ ಜೀನ್ಸ್‌ನ್ನು ಎಂದೂ ತೊಳೆಯಲೇ ಬಾರದು. ಎಂದಿಗೂ ಸಹ! ಆದರೆ ಹೀಗೆ ಬಟ್ಟೆಯನ್ನು ತೊಳೆಯದೆಯೇ ಅದರಲ್ಲಿ ಅಂಟಿದ ಕೊಳೆಗಳನ್ನು ಹಿಡಿದುಕೊಂಡೇ ಇಡೀ ಊರು ತಿರುಗುವುದು ಯಾರಿಗಾದರೂ ಅಸಹ್ಯ ಎನಿಸದೆ ಇರದು. ಬರ್ಗ್ ಹೇಳುವ ಪ್ರಕಾರ ಜೀನ್ಸ್ ಮೇಲೆ ಅಂಟಿದ ಕೊಳೆಗಳನ್ನು ತೆಗೆಯಲು, ಟೂತ್‌ಬ್ರಷ್ ಹಿಡಿದು ಕಲೆ ಇರುವ ಜಾಗವನ್ನು ಮಾತ್ರ ಉಜ್ಜಬೇಕು.
ಸಾಮಾಜಿಕ ತಾಣಗಳಲ್ಲಿ ಈಗ ಬರ್ಗ್ ಅವರ ಜೀನ್ಸ್ ತೊಳೆಯಬಾರದು ಎಂದು ಹೇಳಿರುವ ಈ ವೀಡಿಯೊಗಳು ವೈರಲ್ ಆಗಿವೆ. “ನಾನು ಹೇಳುವುದೇನೆಂದರೆ, ನಾವು ಏನೋ ತೊಟ್ಟ ನಂತರ ಅದನ್ನು ಹಾಗೆಯೇ ಲಾಂಡ್ರಿಗೆ ಹಾಕಬೇಕು ಎನ್ನುವುದು ಗ್ರಾಹಕರ ಮನಸ್ಸಿನಲ್ಲಿ ನಾಟಿ ಬಿಟ್ಟಿದೆ. ಒಳ್ಳೇ ಗುಣಮಟ್ಟದ ಡೆನಿಮ್ ಅನ್ನು ವಾಷಿಂಗ್ ಮೆಷಿನಲ್ಲಿ ತೊಳೆಯುವ ಅಗತ್ಯವೇ ಇರುವುದಿಲ್ಲ. ಅತೀ ಅಪರೂಪವಾಗಿ ಕೆಲವೊಮ್ಮೆ ಬೇಕಾದರೆ ತೊಳೆಯಬಹುದು. ಲಿವೈಸ್‌ನ್ನು ಒಗೆಯುವುದೆಂದರೆ ಅದರ ಮೆಟೀರಿಯಲಿಗೆ ಹಾನಿ ಮಾಡುವುದರ ಜೊತೆಗೆ ನೀರು ಕೂಡ ನಷ್ಟವಾಗುತ್ತದೆ” ಎಂದು ಬರ್ಗ್ ಹೇಳಿದ್ದಾರೆ.
“ಹೊಸ ಜೀನ್ಸ್ ತೊಳೆಯುವವರೆಗೆ ಆರು ತಿಂಗಳ ಕಾಲ ಅತ್ಯುತ್ತಮ ಗುಣಮಟ್ಟದಲ್ಲಿರುತ್ತದೆ. ಅದನ್ನು ಎಷ್ಟು ಕಡಿಮೆ ತೊಳೆಯುತ್ತೀರೋ ಅಷ್ಟೇ ಚೆನ್ನಾಗಿರುತ್ತದೆ. ಜೀನ್ಸ್ ಕೆಲವು ಭಾಗದಲ್ಲಿ ಈಗಾಗಲೇ ಬಹಳ ಸವೆದಿರುವ ಕಾರಣದಿಂದ ಅದನ್ನು ತೊಳೆಯುವ ಪ್ರಯತ್ನ ಮಾಡಿದರೆ ಇನ್ನಷ್ಟು ನಷ್ಟವಾಗುತ್ತದೆ. ಯಾವಾಗಲೂ ಪ್ಯಾಕೆಟಲ್ಲಿ ಫೋನ್ ಇಡುವುದು ಕೈ ಇಡುವುದು ಮೊದಲಾದ ಕೆಲಸಗಳಿಂದ ಜೀನ್ಸ್ ಸವೆದಿರುತ್ತದೆ. ಹೀಗಾಗಿ ತೊಳೆಯುವ ದಿನ ಬಂದಾಗ ಅಂತಹ ಜಾಗಗಳಲ್ಲಿ ನೀಲಿ ಬಣ್ಣ ಸವೆದು ಹೋಗುತ್ತವೆ. ಆದರೆ ಜೀನ್ಸನ್ನು ಮೊದಲೇ ತೊಳೆದರೆ ಈ ಸವೆತದ ಜಾಗದಲ್ಲಿ ಮಾತ್ರ ಮಾಸದೆ ಎಲ್ಲಾ ಕಡೆಗೂ ಸಮನಾಗಿ ನೀಲಿ ಬಣ್ಣ ಮಾಸಿ ಹೋಗುತ್ತದೆ. ಹೀಗಾಗಿ ಜೀನ್ಸ್ ಧರಿಸುವ ನಿಜವಾದ ಲುಕ್ ಇರುವುದಿಲ್ಲ” ಎಂದು ಡೆನಿಮ್ ವೆಬ್‌ತಾಣ ಕೂಡ ಹೇಳುತ್ತದೆ.
ಹೊಸ ಒಣ ಜೀನ್ಸ್ ಪ್ಯಾಂಟುಗಳಿಗೆ ಹೋಲಿಸಿದಲ್ಲಿ ಸವೆದು ಹೋದ ಜೀನ್ಸ್ ತೊಳೆಯುವ ಮೊದಲು ಭಿನ್ನವಾಗೇ ಪರಿಮಳ ಹೊಂದಿರುತ್ತದೆ. ಹೀಗಾಗಿ ಪ್ರಮುಖ ಜೀನ್ಸ್ ತಯಾರಕರು ಬ್ಯಾಕ್ಟೀರಿಯ ಕಳೆದು ಹೋಗಬೇಕೆಂದರೆ ಜೀನ್ಸನ್ನು ರಾತ್ರಿಯಿಡೀ ಫ್ರೀಜರ್‌ನಲ್ಲಿ ಇಡುವ ಸಲಹೆ ನೀಡುತ್ತಾರೆ. ಪರ್ಯಾಯವಾಗಿ ಅವುಗಳನ್ನು ಸೂರ್ಯನ ಬೆಳಕಲ್ಲಿ ಹೊರಗೆ ಒಣಗಿಸುವುದು ಅಥವಾ ನ್ಯೂಟ್ರಲೈಸರ್ ಸ್ಪೇ ಹಾಕುವ ಸಲಹೆಯನ್ನೂ ನೀಡುತ್ತಾರೆ.
ಕೃಪೆ: timesofindia.indiatimes.com