ಡಾ.ತಾವ್ಡೆ ದಾಭೋಲ್ಕರ್ ಹತ್ಯೆಯ ಪ್ರಮುಖ ಸಂಚುಕೋರ-ಸಿಬಿಐ

Update: 2016-09-07 13:52 GMT

ಮುಂಬೈ,ಸೆ.7: ಖ್ಯಾತ ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಲಪಂಥೀಯ ಗುಂಪು ಸನಾತನ ಸಂಸ್ಥಾದ ಕಾರ್ಯಕರ್ತ ಇಎನ್‌ಟಿ ತಜ್ಞ ಡಾ.ವೀರೇಂದ್ರ ತಾವ್ಡೆಯನ್ನು ಪ್ರಮುಖ ಸಂಚುಕೋರನೆಂದು ಸಿಬಿಐ ಹೆಸರಿಸಿದೆ.

ಪುಣೆಯ ನ್ಯಾಯಾಲಯದಲ್ಲಿ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸನಾತನ ಸಂಸ್ಥಾದ ಇನ್ನೂ ಇಬ್ಬರು ಕಾರ್ಯಕರ್ತರಾದ ಸಾರಂಗ ಅಕೋಲ್ಕರ್ ಮತ್ತು ವಿನಯ ಪವಾರ್ ಅವರನ್ನು ದಾಭೋಲ್ಕರ್ ಅವರ ಹಂತಕರೆಂದು ಹೆಸರಿಸಲಾಗಿದೆ. ಪ್ರಸ್ತುತ ಇವರಿಬ್ಬರೂ ತಲೆ ಮರೆಸಿಕೊಂಡಿದ್ದು, ಇನ್ನೋರ್ವ ವಿಚಾರವಾದಿ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಕಳೆದ ಜೂನ್‌ನಲ್ಲಿ ಬಂಧಿಸಲ್ಪಟ್ಟಿರುವ ತಾವ್ಡೆ ಆಗಿನಿಂದಲೂ ಜೈಲಿನಲ್ಲಿದ್ದಾನೆ.


 ಮೂಢನಂಬಿಕೆಗಳ ಕಟುವಿರೋಧಿಯಾಗಿದ್ದ ಪುಣೆ ನಿವಾಸಿ ದಾಭೋಲ್ಕರ್(67) 2013,ಆ.20ರಂದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದಾಗ ಬೈಕ್ ಸವಾರರು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.


ಮೂಢನಂಬಿಕೆಗಳ ವಿರುದ್ಧ ತೀವ್ರ ಅಭಿಯಾನದಲ್ಲಿ ತೊಡಗಿಕೊಂಡಿದ್ದಕ್ಕಾಗಿ ದಾಭೋಲ್ಕರ್ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಹತ್ಯೆಯ ಬಳಿಕ ಅದೇ ವರ್ಷ ಮಹಾರಾಷ್ಟ್ರ ಸರಕಾರವು ಮೂಢನಂಬಿಕೆ ನಿಷೇಧ ಶಾಸನವನ್ನು ತಂದಿತ್ತು. ಇಂತಹ ಕಾನೂನು ಹಿಂದು ವಿರೋಧಿ ಎಂದು ಹಲವಾರು ಬಲಪಂಥೀಯ ಗುಂಪುಗಳು ಪ್ರತಿಭಟಿಸಿದ್ದವು.


ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಸನಾತನ ಸಂಸ್ಥಾವನ್ನು ಅಧಿಕೃತವಾಗಿ ಹೆಸರಿಸಲಾಗಿದೆ ಹಾಗೂ ತಾವ್ಡೆ ಮತ್ತು ಇತರ ಇಬ್ಬರನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ ಎಂದು ದಾಭೋಲ್ಕರ್ ಅವರ ಪುತ್ರ ಹಾಮಿದ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News