ಪೈಲಟ್ ತಪ್ಪಿನಿಂದ ಬೇರೆಯೇ ದೇಶಕ್ಕೆ ಹೋಗಿ ಇಳಿದ ವಿಮಾನ !
ಮೆಲ್ಬರ್ನ್,ಸೆ.7: ಪೈಲಟ್ ತಪ್ಪು ಸಂಕೇತಾಕ್ಷರಗಳನ್ನು ಒತ್ತಿದ್ದರಿಂದ ಸಿಡ್ನಿಯಿಂದ ಮಲೇಷಿಯಾದ ರಾಜಧಾನಿ ಕೌಲಾಲಂಪೂರ್‌ಗೆ ತೆರಳಬೇಕಾಗಿದ್ದ ವಿಮಾನವೊಂದು ಮೆಲ್ಬರ್ನ್‌ನಲ್ಲಿ ಇಳಿದಿತ್ತು ಎನ್ನುವುದನ್ನು ಆಸ್ಟ್ರೇಲಿಯಾದ ವೈಮಾನಿಕ ತನಿಖಾ ವರದಿಯೊಂದು ಪತ್ತೆ ಹಚ್ಚಿದೆ.
2015,ಮಾರ್ಚ್ 15ರಂದು ಈ ಘಟನೆ ನಡೆದಿತ್ತು. ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ವಿಮಾನ 212 ಪ್ರಯಾಣಿಕರೊಂದಿಗೆ ಕೌಲಾಲಂಪೂರ್‌ಗೆ ಹಾರಲು ಸಜ್ಜಾಗಿತ್ತು. ಆಗಲೇ ವಿಮಾನದ ಸಿಬ್ಬಂದಿ ಆ ದಿನ ಮಾಡಿದ್ದ ಹಲವಾರು ತಪ್ಪುಗಳ ಪೈಕಿ ಮೊದಲ ತಪ್ಪು ನಡೆದುಹೋಗಿತ್ತು. ಧರಿಸಿದ್ದ ಹೆಡ್‌ಫೋನ್‌ಗಳಲ್ಲಿ ದೋಷವಿದ್ದರಿಂದ ಪೈಲಟ್ ಮತ್ತು ಫಸ್ಟ್ ಆಫೀಸರ್ ವಿಮಾನ ಹಾರಾಟಕ್ಕೆ ಮೊದಲಿನ ತಮ್ಮ ಕರ್ತವ್ಯಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದರು.
ಸಾಮಾನ್ಯವಾಗಿ ಪೈಲಟ್ ವಿಮಾನದ ಬಾಹ್ಯ ಪರೀಕ್ಷೆಯನ್ನು ನಡೆಸಿದರೆ,ಫಸ್ಟ್ ಆಫೀಸರ್ ಕಾಕ್‌ಪಿಟ್‌ನಲ್ಲಿದ್ದುಕೊಂಡು ಸಿದ್ಧತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾನೆ. ಅಂದು ಫಸ್ಟ್ ಆಫೀಸರ್ ಹೊರಗಿದ್ದು ಪೈಲಟ್ ಕಾಕ್‌ಪಿಟ್‌ನಲ್ಲಿದ್ದ. ವಿಮಾನದ ಪಥದರ್ಶಕ ವ್ಯವಸ್ಥೆಯಲ್ಲಿ ಪೈಲಟ್ 01519.8 ಈಸ್ಟ್ ಎಂಬ ಸಂಕೇತಾಕ್ಷರಗಳನ್ನು ಒತ್ತಬೇಕಾಗಿತ್ತು. ಆದರೆ ತಪ್ಪಿ ಆತ 15109.8 ಈಸ್ಟ್ ಎಂದು ಒತ್ತಿಬಿಟ್ಟಿದ್ದ.
ಇದರಿಂದ ವಿಮಾನದ ಪಥದರ್ಶಕ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತ್ತು. ಈ ತಪ್ಪನ್ನು ಸರಿಪಡಿಸಲು ಸಿಬ್ಬಂದಿಗೆ ಹಲವಾರು ಅವಕಾಶಗಳಿದ್ದವು. ಆದರೆ ವಿಮಾನ ಆಗಸಕ್ಕೇರುವವರೆಗೂ ತಪ್ಪು ಪೈಲಟ್ ಮತ್ತು ಫಸ್ಟ್ ಆಫೀಸರ್ ಗಮನಕ್ಕೆ ಬಂದಿರಲಿಲ್ಲ. ನಿಯಂತ್ರಣ ಕೊಠಡಿಯಿಂದ ರವಾನಿಸಲಾಗಿದ್ದ ಎಚ್ಚರಿಕೆ ಸಂಧೇಶಗಳನ್ನೂ ಅವರು ಕಡೆಗಣಿಸಿದ್ದರು. ಹೀಗಾಗಿ ವಿಮಾನವು ತಪ್ಪುದಿಕ್ಕಿಗೆ ಚಲಿಸಲಾರಂಭಿಸಿತ್ತು.
ತಮ್ಮ ತಪ್ಪು ಅರಿವಾದಾಗ ಅವರಿಬ್ಬರೂ ಪಥದರ್ಶಕ ವ್ಯವಸ್ಥೆಯನ್ನು ಸರಿಪಡಿಸಲು ಯತ್ನಿಸಿದ್ದರು. ಆದರೆ ಆವೇಳೆಗಾಗಲೇ ತುಂಬ ತಡವಾಗಿತ್ತು.ಅವರ ಪ್ರಯತ್ನಗಳಿಂದಾಗಿ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿತ್ತು. ಸಿಡ್ನಿಗೆ ಮರಳುವಂತೆ ಮತ್ತು ಪಥಧರ್ಶಕ ವ್ಯವಸ್ಥೆಯನ್ನು ಬಳಸದೆ ವಿಮಾನವನ್ನು ಕೆಳಗಿಳಿಸುವಂತೆ ಪೈಲಟ್‌ಗೆ ಸೂಚಿಸಲಾಗಿತ್ತು. ಆದರೆ ಸಿಡ್ನಿಯಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಮೆಲ್ಬರ್ನ್‌ನಲ್ಲಿ ಇಳಿಸುವುದು ಅನಿವಾರ್ಯವಾಗಿತ್ತು ಎಂದು ವರದಿಯು ವಿವರಿಸಿದೆ.
ಮೂರು ಗಂಟೆಗಳ ಕಾಲ ಮೆಲ್ಬರ್ನ್ ನಿಲ್ದಾಣದಲ್ಲಿ ಕಳೆದ ಬಳಿಕ ವಿಮಾನ ಕೌಲಾಲಂಪೂರ್‌ಗೆ ಪ್ರಯಾಣಿಸಿತ್ತು.