ಬ್ರೆಝಿಲ್‌ಗೆ ರೋಚಕ ಜಯ, ಪೋರ್ಚುಗಲ್‌ಗೆ ಆಘಾತ

Update: 2016-09-07 17:56 GMT

ಮನೌಸ್, ಸೆ.7: ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಬ್ರೆಝಿಲ್ ತಂಡ ಕೊಲಂಬಿಯಾ ವಿರುದ್ಧ ರೋಚಕ ಜಯ ಸಾಧಿಸಿದರೆ, ಮೆಸ್ಸಿಯಿಲ್ಲದ ಅರ್ಜೆಂಟೀನ ತಂಡ ವೆನೆಝುವೆಲ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಮತ್ತೊಂದು ಪಂದ್ಯದಲ್ಲಿ ಯುರೋ ಚಾಂಪಿಯನ್ ಪೋರ್ಚುಗಲ್ ತಂಡ ಸ್ವಿಟ್ಝರ್ಲೆಂಡ್‌ಗೆ ಶರಣಾಯಿತು.

ಕೊಲಂಬಿಯ ವಿರುದ್ಧ ಪಂದ್ಯದಲ್ಲಿ 2-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಬ್ರೆಝಿಲ್‌ನ ಪರ ನೇಮರ್ 74ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದರು. 2014ರ ವಿಶ್ವಕಪ್‌ನಲ್ಲಿ ಕೊಲಂಬಿಯ ವಿರುದ್ಧದ ಪಂದ್ಯದ ವೇಳೆ ಗಂಭೀರ ಗಾಯಗೊಂಡಿದ್ದ ನೇಮರ್ ಇದೀಗ ಸ್ಮರಣೀಯ ಜಯ ಸಾಧಿಸಿದರು.

ಬ್ರೆಝಿಲ್‌ನ ಪರ ಮಿರಾಂಡ 2ನೆ ನಿಮಿಷದಲ್ಲಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. 31ನೆ ಹುಟ್ಟುಹಬ್ಬ ಆಚರಿಸಿಕೊಂಡ ಡಿಫೆಂಡರ್ ಮಿರಾಂಡ ಚೊಚ್ಚಲ ಅಂತಾರಾಷ್ಟ್ರೀಯ ಗೋಲು ಬಾರಿಸಿದರು. 36ನೆ ನಿಮಿಷದಲ್ಲಿ ಹೆಡರ್‌ನ ಮೂಲಕ ಗೋಲು ಬಾರಿಸಿದ ಮಾರ್ಕೂನಾಸ್ ಕೊಲಂಬಿಯಾ ತಿರುಗೇಟು ನೀಡಲು ನೆರವಾದರು.

74ನೆ ನಿಮಿಷದಲ್ಲಿ ಗೋಲು ಬಾರಿಸಿದ ನೇಮರ್ ಬ್ರೆಝಿಲ್‌ನ ಗೆಲುವು ಖಾತ್ರಿಪಡಿಸಿದರು. ಈ ಗೆಲುವಿನೊಂದಿಗೆ ಬ್ರೆಝಿಲ್ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿತು. ಐದು ಬಾರಿಯ ಚಾಂಪಿಯನ್ ಬ್ರೆಝಿಲ್ 8 ಪಂದ್ಯಗಳಲ್ಲಿ ಒಟ್ಟು 15 ಅಂಕ ಗಳಿಸಿದೆ.

ವೆನೆಝುವೆಲಾ ವಿರುದ್ಧ ಅರ್ಜೆಂಟೀನ ಡ್ರಾ: ಮೆರಿಡಾ, ಸೆ.7: ನಿಕೊಲಸ್ ಒಟಮೆಂಡಿ ಕೊನೆಯ ಕ್ಷಣದಲ್ಲಿ(83ನೆ ನಿಮಿಷ) ಬಾರಿಸಿದ ಗೋಲು ನೆರವಿನಿಂದ ಅರ್ಜೆಂಟೀನ ತಂಡ ವೆನೆಝುವೆಲಾ ವಿರುದ್ಧ 2-2 ಅಂತರದಿಂದ ಡ್ರಾ ಸಾಧಿಸಿದೆ.

ಗಾಯಗೊಂಡಿರುವ ನಾಯಕ ಲಿಯೊನೆಲ್ ಮೆಸ್ಸಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಅರ್ಜೆಂಟೀನದ ವಿರುದ್ಧ ವೆನೆಝುವೆಲಾ 35ನೆ ನಿಮಿಷದಲ್ಲಿ ಮುನ್ನಡೆ ಸಾಧಿಸಿತ್ತು. ಜುಯಾನ್‌ಪಿ ಮೊದಲ ಗೋಲು ಬಾರಿಸಿದರು. 52ನೆ ನಿಮಿಷದಲ್ಲಿ ಗೋಲು ಬಾರಿಸಿದ ಮಾರ್ಟಿನೆಝ್ ವೆನೆಝುವೆಲಾದ ಮುನ್ನಡೆಯನ್ನು 2-0ಗೆ ಏರಿಸಿದರು. 58ನೆ ನಿಮಿಷದಲ್ಲಿ ಗೋಲು ಬಾರಿಸಿದ ಪ್ರಾಟ್ಟೊ ಅರ್ಜೆಂಟೀನ ತಿರುಗೇಟು ನೀಡಲು ನೆರವಾದರು.

83ನೆ ನಿಮಿಷದಲ್ಲಿ ಒಟಮೆಂಡಿ ನಿರ್ಣಾಯಕ ಗೋಲು ಬಾರಿಸಿದರು. ವೆನೆಝುವೆಲಾ 7 ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿದ್ದು, ಮೊದಲ ಗೆಲುವು ಸಾಧಿಸಬೇಕೆಂಬ ಕನಸಿಗೆ ಅರ್ಜೆಂಟೀನ ಅಡ್ಡಿಯಾಯಿತು.

ಯುರೋ ಚಾಂಪಿಯನ್ ಪೋರ್ಚುಗಲ್‌ಗೆ ಶಾಕ್

ಪ್ಯಾರಿಸ್, ಸೆ.7: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅನುಪಸ್ಥಿತಿಯಲ್ಲಿ 2018ರ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯ ಆಡಿರುವ ಪೋರ್ಚುಗಲ್ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಯುರೋ ಚಾಂಪಿಯನ್ ಪೋರ್ಚುಗಲ್ ತಂಡ ಸ್ವಿಟ್ಝರ್ಲೆಂಡ್‌ನ ವಿರುದ್ಧ 0-2 ಅಂತರದಿಂದ ಸೋತು ಭಾರೀ ನಿರಾಸೆ ಮೂಡಿಸಿತು.

ಸ್ವಿಸ್‌ನ ಪರ ತಲಾ ಒಂದು ಗೋಲು ಬಾರಿಸಿದ ಬ್ರೀಲ್ ಎಂಬಾಲೊ(23ನೆ ನಿಮಿಷ) ಹಾಗೂ ಅಡ್ಮಿರ್ ಮೆಹ್ಮೆದಿ(30ನೆ ನಿ.) ಬಿ ಗುಂಪಿನಲ್ಲಿ ತಮ್ಮ ತಂಡಕ್ಕೆ ಗೆಲುವಿನ ಆರಂಭ ನೀಡಿದ್ದಾರೆ.

ಜುಲೈನಲ್ಲಿ ನಡೆದ ಯುರೋ ಕಪ್ ಫೈನಲ್‌ನಲ್ಲಿ ಹೆಚ್ಚುವರಿ ಸಮಯದಲ್ಲಿ ಫ್ರಾನ್ಸ್‌ನ ವಿರುದ್ಧ 1-0 ಗೆಲುವಿಗೆ ಕಾರಣರಾಗಿದ್ದ ಆಟಗಾರರ ಪೈಕಿ ಓರ್ವರಾಗಿರುವ ರೊನಾಲ್ಡೊ ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News