ಮುಂಬ್ರಾ: ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ
ಥಾಣೆ,ಸೆ.7: ಇಲ್ಲಿಗೆ ಸಮೀಪದ ಕೌಸಾದಲ್ಲಿ ಮಧ್ಯರಾತ್ರಿಯ ವೇಳೆ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸುವ ಮೂಲಕ ಮುಂಬ್ರಾದ ಮುಸ್ಲಿಂ ಯುವಕರ ಗುಂಪು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ಕೌಸಾ ನಿವಾಸಿ ವಾಮನ ಕದಂ(65) ಅವರು ರಾತ್ರಿ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನಡೆಸಲು ಅವರ ಪತ್ನಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅವರ ಸಂಕಷ್ಟಕ್ಕೆ ಸ್ಪಂದಿಸಿದ ಮುಂಬ್ರಾದ ಯುವಕರಾದ ಖಲೀಲ್ ಪಾವ್ಣೆ, ಫಹಾದ್ ದಬೀರ್, ನವಾಝ್ ದಬೀರ್, ರಾಹಿಲ್ ದಬೀರ್, ಶಬಾನ ಖಾನ್, ಮಕ್ಸೂದ್ ಖಾನ್, ಫಾರೂಕ್ ಖಾನ್ ಮತ್ತು ಮುಹಮ್ಮದ್ ಕಸಮ್ ಶೇಖ್ ಅವರು ಚಟ್ಟ ತಯಾರಿಗೆ ಅಗತ್ಯವಾದ ಬಿದಿರು ಮತ್ತು ಹಗ್ಗ, ಮಡಕೆ, ಅಗರಬತ್ತಿ, ಬಟ್ಟೆ ಇತ್ಯಾದಿ ಸಾಮಗ್ರಿಗಳನ್ನು ತಂದಿದ್ದರು. ಹಿಂದೂ ಸಂಪ್ರದಾಯದಂತೆ ಚಟ್ಟವನ್ನು ತಯಾರಿಸಿ ನಸುಕಿನ ಮೂರು ಗಂಟೆಯ ಸುಮಾರಿಗೆ ಕದಂ ಅವರ ಪಾರ್ಥಿವ ಶರೀರವನ್ನು ಚಿತಾಗಾರಕ್ಕೊಯ್ದು ವಿಧಿವತ್ತಾಗಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಯುವಕರ ಈ ಮಹತ್ಕಾರ್ಯವನ್ನು ಮುಂಬ್ರಾ-ಕಲ್ವಾ ಶಾಸಕ ಜಿತೇಂದ್ರ ಅವ್ಹಾದ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶಂಸಿಸಿ, ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮುಂಬ್ರಾದ ಜನರೂ ಈ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.