×
Ad

ವಿದೇಶ ಪ್ರವಾಸದ ವಿವರ ಕೇಳಿದ ಜಂಗ್ ವಿರುದ್ಧ ಆಪ್ ಸಚಿವನ ವಾಗ್ದಾಳಿ

Update: 2016-09-07 23:48 IST

ಹೊಸದಿಲ್ಲಿ, ಸೆ.7: ಆಪ್ ಸಚಿವರು ನಡೆಸಿರುವ ವಿದೇಶ ಪ್ರವಾಸಗಳ ವಿವರ ಕೇಳಿದುದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ವಾಗ್ದಾಳಿ ನಡೆಸಿರುವ ದಿಲ್ಲಿಯ ಗೃಹ ಸಚಿವ ಸತ್ಯೇಂದರ್ ಜೈನ್, ದೇಶದ ಇತರ ರಾಜ್ಯಗಳ ಸೋದ್ಯೋಗಿಗಳಿಗೆ ಹೋಲಿಸಿದರೆ ತನ್ನ ಪಕ್ಷದ ಸಚಿವರು ಕೈಗೊಂಡಿರುವ ವಿದೇಶ ಪ್ರವಾಸಗಳು ಕಡಿಮೆಯಿದೆ ಎಂದಿದ್ದಾರೆ.

ಸಚಿವರ ವಿದೇಶ ಪ್ರವಾಸಗಳ ಮೇಲೆ ಕಣ್ಣಿಡಲು ಲೆಫ್ಟಿನೆಂಟ್ ಗವರ್ನರ್ ಆರಂಭಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳ ಕುರಿತಾಗಿಯೂ ವಿವರ ಕೇಳುವಂತೆ ಜಂಗ್‌ರಿಗೆ ಸವಾಲು ಹಾಕಿದ್ದಾರೆ.
ಎಎಪಿ ಸಚಿವರು, ಅವರ ವೈಯಕ್ತಿಕ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಕಳೆದ 18 ತಿಂಗಳುಗಳಲ್ಲಿ ನಡೆಸಿರುವ ಎಲ್ಲ ವಿದೇಶ ಪ್ರವಾಸಗಳ ವಿವರ ಒದಗಿಸುವಂತೆ ಕಳೆದ ವಾರ ನಜೀಬ್ ಜಂಗ್, ದಿಲ್ಲಿ ಸರಕಾರದ ಸಾಮಾನ್ಯ ಆಡಳಿತ ಇಲಾಖೆಗೆ ನಿರ್ದೇಶನ ನೀಡಿದ್ದರು.
ವಿದೇಶ ಪ್ರವಾಸಗಳ ವೇಳೆ, ಅಲ್ಲಿ ಉಳಿದುಕೊಂಡಿದ್ದ ಅವಧಿ ಹಾಗೂ ಮಾಡಿರುವ ವೆಚ್ಚ ಮಾತ್ರವಲ್ಲದೆ, ಭೇಟಿಯ ‘ಉದ್ದೇಶದ’ ಕುರಿತಾಗಿಯೂ ವಿವರ ನೀಡುವಂತೆ ಎಲ್‌ಜಿ ಕಚೇರಿ ಕೇಳಿತ್ತು.
ಅವರು ಪ್ರಧಾನಿಯ ವಿದೇಶ ಪ್ರವಾಸಗಳ ವಿವರವನ್ನೂ ಕೇಳುವರೇ? ಅವರು ಯಾವಾಗಿನಿಂದ ಸಚಿವರ ವಿದೇಶ ಯಾತ್ರೆಗಳ ತಪಾಸಣೆ ಆರಂಭಿಸಿದ್ದಾರೆ? ಎಂದು ಜಂಗ್‌ರ ವಿರುದ್ಧ ಜೈನ್ ಕಿಡಿಕಾರಿದ್ದಾರೆ.
ಸರಕಾರದ ಅನುಮತಿಯ ಬಳಿಕವೇ ಕೇವಲ ಅಧಿಕೃತ ಉ್ದೇಶಗಳಿಗಾಗಿ ಎಎಪಿ ಸಚಿವರು ವಿದೇಶ ಪ್ರವಾಸಗಳನ್ನು ನಡೆಸಿದ್ದಾರೆ. ಇಡೀ ದೇಶವನ್ನು ಹೋಲಿಸಿದರೆ, ತಾವು ಕಡಿಮೆ ವಿದೇಶ ಯಾತ್ರೆಗಳನ್ನು ಮಾಡಿದ್ದೇವೆ. ಸ್ವಂತ ಉದ್ದೇಶಕ್ಕಾಗಿ ಹೋದ ವೇಳೆ ತಮ್ಮ ಕಿಸೆಯಿಂದಲೇ ಖರ್ಚು ಮಾಡಿದ್ದೇವೆಂದು ಅವರು ಪ್ರತಿಪಾದಿಸಿದ್ದಾರೆ.
ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹಾಗೂ ಜೈನ್ ತಲಾ 4 ಬಾರಿ ಸರಕಾರದ ವೆಚ್ಚದಲ್ಲಿ ವಿದೇಶಗಳಿಗೆ ಹೋಗಿದ್ದಾರೆ. ಕಾರ್ಮಿಕ ಸಚಿವ ಗೋಪಾಲ್ ರಾಯ್ ಹಾಗೂ ಜೈನ್, ಸ್ವೀಡನ್‌ಗೆ 5 ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದರೆಂದು ಸರಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News